ಸೋಂಕಿತರು ಸಂಪರ್ಕಿಸಿದವರಿಗೆ ಸರಕಾರದಿಂದಲೇ ಆಶ್ರಯ: ಡಿಸಿ

Update: 2020-03-30 14:30 GMT

ಉಡುಪಿ, ಮಾ.30: ಜಿಲ್ಲೆಯ ಮೂವರು ಕೊರೋನ ಸೋಂಕಿತರು ಸಂರ್ಪಕಿಸಿರುವ ಪ್ರತಿಯೊಬ್ಬರನ್ನು ಕೂಡ ಸರಕಾರದ ಆಶ್ರಯದಲ್ಲೇ ಇರಿಸಿ ಕೊಳ್ಳುವ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡುತ್ತಿದ್ದು, ಅವರು ಯಾವುದೇ ಕಾರಣಕ್ಕೂ ಹೊರಗೆ ಹೋಗದಂತೆ ಪೊಲೀಸ್ ಭದ್ರತೆ ಕೂಡ ಮಾಡಲಾಗುತ್ತಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಉಡುಪಿ ಜಿಪಂ ಸಭಾಂಗಣದಲ್ಲಿ ಇಂದು ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರದ ಆದೇಶವನ್ನು ಉಲ್ಲಂಘಿಸಿ ಸಾರ್ವಜನಿಕ ಪ್ರದೇಶದಲ್ಲಿ ಓಡಾಡಿದ ಮಣಿಪುರದ ಕೊರೋನ ಸೋಂಕಿತನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗುವುದು. ಅದೇ ರೀತಿ ಸೋಂಕಿತರು ಸಂಪರ್ಕಿಸಿದವರನ್ನು ರಕ್ಷಿಸುವ ನಿಟ್ಟಿನಲ್ಲಿ ಒಂದು ಕಡೆಯಲ್ಲಿ ಸೇರಿಸಲಾಗುತ್ತದೆ. ಇವರಲ್ಲಿ ಹೈ ರಿಸ್ಕ್ ಇರುವವರನ್ನು ಉದ್ಯಾವರ ಎಸ್‌ಡಿಎಂ ಆಯುರ್ವೇದ ಆಸ್ಪತ್ರೆ ಹಾಗೂ ಉಳಿದ ವರನ್ನು ಹಾಸ್ಟೆಲ್‌ಗಳಲ್ಲಿ ಇರಿಸಿಕೊಳ್ಳುವ ಕಾರ್ಯ ನಡೆಸಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ ಸುಮಾರು 4000 ವಲಸೆ ಕಾರ್ಮಿಕರಿದ್ದು, ಇದರಲ್ಲಿ 435 ಮಂದಿಯನ್ನು ನಿರಾಶ್ರಿತರ ಶಿಬಿರದಲ್ಲಿ ಇರಿಸಿ, ಜಿಲ್ಲಾಡಳಿತದ ವತಿಯಿಂದ ಊಟ ಹಾಗೂ ಉಪಹಾರದ ವ್ಯವಸ್ಥೆ ಮಾಡಲಾಗುತ್ತಿದೆ. ಉಳಿದವರನ್ನು ಅವರವರ ಶಿಬಿರಗಳಲ್ಲೇ ಉಳಿದುಕೊಳ್ಳಲು ಸೂಚನೆ ನೀಡಲಾಗಿದೆ. ಇವರಿಗೆ ದಾನಿಗಳು, ದೇವಸ್ಥಾನಗಳ ಮೂಲಕ ಆಹಾರದ ಕಿಟ್‌ಗಳನ್ನು ವಿತರಣೆ ಮಾಡ ಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಮಲ್ಪೆ ಬಂದರಿನಲ್ಲಿರುವ 385 ಮಂದಿ ಹೊರ ರಾಜ್ಯ ಹಾಗೂ ಜಿಲ್ಲೆಗಳ ಕಾರ್ಮಿಕರಿಗೆ ವಸತಿ ಮತ್ತು ಊಟದ ವ್ಯವಸ್ಥೆ ಮಾಡುವ ಜವಾಬ್ದಾರಿ ಯನ್ನು ಆಯಾ ಬೋಟುಗಳ ಮಾಲಕರಿಗೆ ನೀಡಲಾಗಿದೆ. ಇಲ್ಲದಿದ್ದರೆ ಮಾಲಕರ ವಿರುದ್ದ ಕಠಿಣ ಕ್ರಮಕೈಗೊಳ್ಳಲಾಗುವುದು. ಅದೇ ರೀತಿ ಜಿಲ್ಲೆಯ ವಲಸೆ ಕಾರ್ಮಿಕರ ಜೋಪಡಿಗಳಿಗೆ ನೆಲ ಬಾಡಿಗೆಯನ್ನು ಮಾಲಕರು ಪಡೆದುಕೊಳ್ಳ ಬಾರದು. ಯಾವುದೇ ಕಾರಣಕ್ಕೂ ಅವರು ಹೊರಗಡೆ ಹೋುವಂತಿಲ್ಲ ಎಂದು ಅವರು ತಿಳಿಸಿದರು.

ಮಾಸ್ಕ್ ಮಾರಾಟದ ತಂತ್ರ

ಹೊರಗೆ ಬರುವ ಆರೋಗ್ಯವಂತರಿಗೆ ಮಾಸ್ಕ್ ಕಡ್ಡಾಯ ಇಲ್ಲ ಎಂಬುದಾಗಿ ಈಗಾಗಲೇ ಎಸ್ಪಿಯವರ ಮೂಲಕ ಎಲ್ಲ ಪೊಲಸ್ ಠಾಣೆಗಳಿಗೆ ಸೂಚನೆ ನೀಡಲಾಗಿದೆ. ಮೆಡಿಕಲ್‌ಗಳಲ್ಲಿ ಮಾಸ್ಕ್ ಕಡ್ಡಾಯ ಎಂಬುದಾಗಿ ಬೋರ್ಡ್ ಹಾಕಿರುವುದು ಮಾಸ್ಕ್ ಮಾರಾಟದ ತಂತ್ರವಾಗಿದೆ. ಕಾಯಿಲೆ ಇರುವವರು ಮತ್ತು ಕಾಯಿಲೆ ಇರುವವರ ಹತ್ತಿರ ಬರುವವರು ಮಾತ್ರ ಮಾಸ್ಕ್ ಧರಿಸಿದರೆ ಸಾಕಾಗುತ್ತದೆ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.

ಜಿಲ್ಲೆಗೆ ಬೇಕಾದಷ್ಟು ಸ್ಯಾನಿಟೈಝರ್‌ಗಳನ್ನು ಜಿಲ್ಲೆಯ ಲಿಕ್ಕರ್ ಫ್ಯಾಕ್ಟರಿಯಲ್ಲಿ ಉತ್ಪಾದನೆ ಮಾಡಲಾಗುತ್ತಿದೆ. ಅದೇ ರೀತಿ ಇದರಲ್ಲಿ ದ.ಕ. ಜಿಲ್ಲೆಗೂ ನೀಡ ಲಾಗುತ್ತದೆ. ಅಲ್ಲದೆ ಮಾಸ್ಕ್‌ಗಳನ್ನು ಕೂಡ ಸರಕಾರದಿಂದ ತರಿಸಿಕೊಳ್ಳಲಾಗು ತ್ತದೆ ಮತ್ತು ದಾನಿಗಳಿಂದಲೂ ಸ್ವೀಕರಿಸುತ್ತಿದ್ದೇವೆ. ಉದ್ಯಮಿ ಜಿ.ಶಂಕರ್ ಒಂದು ಲಕ್ಷ ಮಾಸ್ಕ್‌ಗಳನ್ನು ಜಿಲ್ಲಾಡಳಿತಕ್ಕೆ ನೀಡುತ್ತಿದ್ದು, 2000 ಎನ್-95 ಮಾಸ್ಕ್ ಗಳನ್ನು ನೀಡಲಿದ್ದಾರೆ. ಇನ್ಫೋಸಿಸ್‌ನವರು ಕೂಡ ಮಾಸ್ಕ್ ಕೊಡುವುದಾಗಿ ಭರವಸೆ ನೀಡಿದ್ದಾರೆ ಎಂದರು.

ಮೀನುಗಾರಿಕೆ ನಿಷೇಧ ಇಲ್ಲ

ಬಂದರಿನಲ್ಲಿ ಜನ ಸೇರುತ್ತಾರೆ ಎಂಬ ಕಾರಣಕ್ಕೆ ಬಂದರನ್ನು ಬಂದ್ ಮಾಡ ಲಾಗಿದೆಯೇ ಹೊರತು ಮೀನುಗಾರಿಕೆಯನ್ನು ನಾವು ನಿಷೇಧ ಮಾಡಿಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.

ಒಂದು ಬೋಟು ಅಥವಾ ದೋಣಿಯಲ್ಲಿ ಐದು ಜನರಿಗಿಂತ ಹೆಚ್ಚು ಮಂದಿ ಸೇರಿ ಮೀನುಗಾರಿಕೆ ಮಾಡಿದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸ ಲಾಗುವುದು. ಒಬ್ಬರೇ ಹೋಗಿ ಮೀನುಗಾರಿಕೆ ಮಾಡಿದರೆ ತೊಂದರೆ ಇಲ್ಲ. ಮಾರುಕಟ್ಟೆಯಲ್ಲೂ ಆರು ಅಡಿ ಅಂತರದಲ್ಲಿ ಮೀನು ಮಾರಾಟ ಮಾಡ ಬಹುದಾಗಿದೆ. ಸಾಂಪ್ರಾದಾಯಿಕವಾಗಿ ಮೀನುಗಾರಿಕೆ ಮಾಡುವುದರಲ್ಲಿ ಯಾವುದೇ ತೊಂದರೆ ಇಲ್ಲ ಎಂದು ಅವರು ತಿಳಿಸಿದರು.

‘ರೆಡ್‌ರೆನ್ ಅಗತ್ಯ ಇಲ್ಲ’

ಕೊರೋನ ಸಮುದಾಯದಲ್ಲಿ ಹರಡುವ ಭೀತಿಯಿಂದ ರಾಜ್ಯದ ಭಟ್ಕಳ, ಗೌರಿಬಿದನೂರು, ನಂಜನಗೂಡುಗಳಲ್ಲಿ ರೆಡ್‌ರೆನ್ ನಿರ್ಮಿಸಲಾಗಿದೆ. ಆದರೆ ನಮ್ಮ ಜಿಲ್ಲೆಯಲ್ಲಿ ಆ ಪರಿಸ್ಥಿತಿ ನಿರ್ಮಾಣ ಆಗಿಲ್ಲ. ಮುಂದೆ ಅನಿ ವಾರ್ಯವಾದರೆ ನಾವು ಕೂಡ ಮಾಡುತ್ತೇವೆ ಎಂದುಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲೆಯಲ್ಲಿ ತಾಲೂಕು ಮಟ್ಟದ ಸರಕಾರಿ ಆಸ್ಪತ್ರೆಗಳಲ್ಲಿ ಫಿವರ್ ಕ್ಲಿನಿಕ್ ತೆರೆಯುವ ಉದ್ದೇಶ ಕೂಡ ನಮ್ಮ ಮುಂದೆ ಇದ್ದು, ಅಲ್ಲಿ ಜ್ವರದಿಂದ ಬಳಲು ತ್ತಿರುವವರನ್ನು ಪರೀಕ್ಷೆ ಮಾಡಿ, ಅಗತ್ಯ ಇರುವವರನ್ನು ಮಾತ್ರ ಆಸ್ಪತ್ರೆಗಳಲ್ಲಿ ದಾಖಲಿಸಿಕೊಳ್ಳಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News