ಮದ್ಯ ಸೇವನೆ ಚಟ : ಲಾಕ್‌ಡೌನ್ ಮಧ್ಯೆ ಉಡುಪಿಯಲ್ಲಿ 6 ಮಂದಿ ಮೃತ್ಯು

Update: 2020-03-30 15:40 GMT

ಉಡುಪಿ, ಮಾ. 30: ಕೊರೋನ ವೈರಸ್ ಭೀತಿಯ ಹಿನ್ನೆಲೆಯಲ್ಲಿ ವಿಧಿಸಲಾಗಿರುವ ಲಾಕ್‌ಡೌನ್ ಮಧ್ಯೆ ಉಡುಪಿ ಜಿಲ್ಲೆಯಲ್ಲಿ ಕಳೆದ ಐದು ದಿನಗಳಲ್ಲಿ ಮದ್ಯ ಸೇವನೆ ಚಟ ಹೊಂದಿದ್ದ ಆರು ಮಂದಿ ಮೃತಪಟ್ಟಿರುವ ಬಗ್ಗೆ ವರದಿ ಯಾಗಿದೆ.

ಮದ್ಯ ದೊರೆಯದ ಕಾರಣಕ್ಕಾಗಿ ಮಾ. 26ರಂದು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯ ದುರ್ಗಾ ಗ್ರಾಮದ ತೆಳ್ಳಾರು ಬೆದ್ರಪಲ್ಕೆಯ ನಾಗೇಶ್ ಆಚಾರ್ಯ(37) ಹಾಗೂ ಮಾ.28ರಂದು ಕಾಪು ಪೊಲೀಸ್ ಠಾಣಾ ವ್ಯಾಪ್ತಿಯ ಕಾಪು ರಾಮನಗರದ ಶಶಿಧರ ಸುವರ್ಣ (46) ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅದೇ ರೀತಿ ವಿಪರೀತ ಮದ್ಯ ಸೇವನೆ ಚಟದಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ಮಾ. 24ರಂದು ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ಳಂಪಳ್ಳಿ ಗ್ರಾಮದ ಕುಕ್ಕಿಕ್ಕಟ್ಟೆಯ ವಾಲ್ಟರ್ ಡಿಸೋಜ (57), ಮಾ.27ರಂದು ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಹೆಮ್ಮಾಡಿ ಗ್ರಾಮದ ಸಂತೋಷ ನಗರದ ರಾಘವೇಂದ್ರ (37), ಮಾ.26ರಂದು ಕಾಪು ಪೊಲೀಸ್ ಠಾಣಾ ವ್ಯಾಪ್ತಿಯ ಉದ್ಯಾವರ ಬೋಳಾರ್ಗುಡ್ಡೆಯ ಗಣೇಶ (42) ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅದೇ ರೀತಿ ಮದ್ಯ ಸೇವಿಸುವ ಚಟ ಹೊಂದಿದ್ದ ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಮುನಿಯಾಲು ಗಾಂಧಿನಗರದ ಅರವಿಂದ(37) ಎಂಬವರು ಮಾ.25ರಂದು ಮಲಗಿದ್ದಲ್ಲಿಯೇ ಮೃತಪಟ್ಟಿದ್ದಾರೆ. ಕೆಲವು ದಿನಗಳಿಂದ ಕುಡಿಯಲು ಮದ್ಯ ಸಿಗದ ಕಾರಣಕ್ಕೆ ಅಪರಿಚಿತ ಯುವಕನೋರ್ವ ಮಾ.30ರಂದು ಸಂಜೆ ವೇಳೆ ಆತ್ಮಹತ್ಯೆಗೆ ಯತ್ನಿಸಿದ್ದು, ಆತನನ್ನು ಸಾಮಾಜಿಕ ಕಾರ್ಯಕರ್ತರು ರಕ್ಷಿಸಿ ಉಡುಪಿ ನಗರದ ಬೋರ್ಡ್ ಹೈಸ್ಕೂಲ್‌ ನಲ್ಲಿರುವ ವಲಸೆ ಕಾರ್ಮಿಕರ ತಾತ್ಕಾಲಿಕ ಪುನರ್ವಸತಿ ಕೇಂದ್ರದಲ್ಲಿ ದಾಖಲಿಸಿದ್ದಾರೆ.

ಮದ್ಯ ಸಿಗದೆ ಮಾನಸಿಕ ಖಿನ್ನತೆಗೆ ಒಳಗಾಗುವವರಿಗೆ ಜಿಲ್ಲಾಡಳಿತದ ವತಿಯಿಂದ ಸಮಾಲೋಚನೆ ಮಾಡಲಾಗುವುದು. ಇದಕ್ಕಾಗಿ ಜಿಲ್ಲಾ ಮಟ್ಟದ ತಂಡ ಹಾಗೂ ಮನೋವೈದ್ಯರು ಸಿದ್ಧರಾಗಿದ್ದಾರೆ. ಆಯಾ ಮನೆಯವರು ನಮ್ಮ ಗಮನಕ್ಕೆ ತಂದರೆ ಅಥವಾ ನಮ್ಮ ಆರೋಗ್ಯ ಇಲಾಖೆಯ ಕಾಲ್ ಸೆಂಟರ್‌ಗೆ ಕರೆ ಮಾಡಿದರೆ ಆ ವ್ಯಕ್ತಿಗೆ ಸಮಾಲೋಚನೆ ಮಾಡಿ ಸರಿಪಡಿಸುವ ಕೆಲಸ ಮಾಡಲಾಗುವುದು.

- ಜಿ.ಜಗದೀಶ್, ಜಿಲ್ಲಾಧಿಕಾರಿ, ಉಡುಪಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News