ಮಾನವೀಯತೆ ಮೆರೆದ ವಿಜಯಪುರ ಜಿಲ್ಲಾಧಿಕಾರಿ: ಕಾರ್ಕಳದ 13 ಮಂದಿಗೆ ವಸತಿ ಸೌಲಭ್ಯ

Update: 2020-03-30 16:38 GMT

ವಿಜಯಪುರ, ಮಾ. 30: ಮಹಾರಾಷ್ಟ್ರದ ಬಾರಾಮತಿಯಿಂದ ಉಡುಪಿ ಜಿಲ್ಲೆಯ ಕಾರ್ಕಳಕ್ಕೆ ತೆರಳುತ್ತಿದ್ದ 13 ಮಂದಿ ಲಾಕ್‌ಡೌನ್ ಜಾರಿಯಿಂದ ವಸತಿ ಮತ್ತು ಊಟದ ಸೌಕರ್ಯವಿಲ್ಲದೆ ವಿಜಯಪುರದಲ್ಲಿ ಸಿಲುಕಿಕೊಂಡಿದ್ದು ಇವರಿಗೆ ವಸತಿ ಸೌಲಭ್ಯ ಕಲ್ಪಿಸುವ ಮೂಲಕ ವಿಜಯಪುರದ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಮಾನವೀಯತೆ ಮೆರೆದಿದ್ದಾರೆ.

ವಿಜಯಪುರ ನಗರದ ಇಟಗಿ ಪೆಟ್ರೋಲ್ ಬಂಕ್, ಆಕಾಶವಾಣಿ ಕೇಂದ್ರ, ಸಾಯಿಪಾರ್ಕ್, ಹಮಾಲಕಾಲನಿ ಸೇರಿದಂತೆ ವಿವಿಧ ಕಡೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್, ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಅವರು ಅಲೆಮಾರಿ ಜನಾಂಗಗಳಿಗೆ ಊಟೋಪಹಾರ ಸೌಲಭ್ಯ, ವಸತಿ ಸೌಲಭ್ಯ ಅಲ್ಲದೇ ನಿಷೇದಾಜ್ಞೆ ಮತ್ತು ಲಾಕ್‌ಡೌನ್ ಜಾರಿ ಕುರಿತು ಪರಿಶೀಲನೆ ನಡೆಸುತ್ತಿರುವ ವೇಳೆ ಕಾರ್ಕಳದ ಯವಕರ ಸ್ಥಿತಿ ಅವರ ಗಮನಕ್ಕೆ ಬಂದಿತ್ತು.

ಮಹಾರಾಷ್ಟ್ರದ ಬಾರಾಮತಿಯಿಂದ ಉಡುಪಿ ಜಿಲ್ಲೆಯ ಕಾರ್ಕಳಕ್ಕೆ ತೆರಳ ಬಯಸಿದ್ದ 13 ಮಂದಿ ಊಟ-ವಸತಿಯಿಲ್ಲದೆ ನಿರ್ಗತಿಕರಂತೆ ನಗರದಲ್ಲಿ ಅತಂತ್ರ ಸ್ಥಿತಿಯಲ್ಲಿರುವುದನ್ನು ಗಮನಿಸಿದ ಜಿಲ್ಲಾಧಿಕಾರಿಗಳು ತಕ್ಷಣ ಈವರಿಗೆ ಆರೋಗ್ಯ ತಪಾಸಣೆಗೆ ಸೂಚಿಸಿದರಲ್ಲದೇ, ನಗರದ ಕಾಕಾ ಕಾರ್ಖಾನಿಸ್ ಕಲ್ಯಾಣ ಮಂಟಪದಲ್ಲಿ ಅವರ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸುವುದರೊಂದಿಗೆ ಊಟ-ಉಪಹಾರ ವ್ಯವಸ್ಥೆಯನ್ನು ಕಲ್ಪಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ನಗರ ಪರಿವೀಕ್ಷಣೆ ಅಂಗವಾಗಿ ಬೀದಿಯಲ್ಲಿ ಅಲೆಯುತ್ತಿದ್ದ ಅಲೆಮಾರಿ ಜನಾಂಗದ ಮಹಿಳೆಯರು, ಮಕ್ಕಳಿಗೆ ವಸತಿ ಸೌಲಭ್ಯ ಕಲ್ಪಿಸುವ ಕುರಿತು ಕ್ರಮಕೈಗೊಳ್ಳಲು ಮಹಾನಗರ ಪಾಲಿಕೆ ಆಯುಕ್ತರಿಗೆ ಸೂಚಿಸಿದರು. ಅದರಂತೆ ಹಮಾಲ್ ಕಾಲನಿಯಲ್ಲಿ ಸುಮಾರು 100ಕ್ಕೂ ಹೆಚ್ಚು ಅಲೆಮಾರಿ ಜನಾಂಗದ ಜನರು ಉಳಿದಿರುವುದನ್ನು ಗಮನಿಸಿ ನಾಳೆ ಬೆಳಿಗ್ಗೆಯಿಂದ ಅಕ್ಕಿ, ಗೋಧಿಹಿಟ್ಟು, ಬೇಳೆಕಾಳು ಸೇರಿದಂತೆ ಅಗತ್ಯ ವಸ್ತುಗಳ ಸೌಲಭ್ಯ ಕಲ್ಪಿಸುವಂತೆ ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಾದ್ಯಂತ ಲಾಕ್‌ಡೌನ್ ಆದೇಶ ಜಾರಿಯಲ್ಲಿದ್ದು, ಇದನ್ನು ಉಲ್ಲಂಘಿಸದಂತೆ, ಬೇರೆ ಜಿಲ್ಲೆಗಳಿಗೆ ಪ್ರಯಾಣಿಸದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ ಅಗರವಾಲ ವಲಸೆ ಯುವಕರಿಗೆ ಕಿವಿಮಾತು ಹೇಳಿದರು. ಈ ಸಂದರ್ಭದಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ಗೋವಿಂದ ರೆಡ್ಡಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News