ಅಧಿಕ ದರ ವಸೂಲಿ ಮಾಡಿದರೆ ಕ್ರಮ: ಸಚಿವ ಶ್ರೀನಿವಾಸ್ ಪೂಜಾರಿ

Update: 2020-03-30 16:11 GMT

ಬಂಟ್ವಾಳ, ಮಾ.30: ಅಗತ್ಯ ವಸ್ತುಗಳಿಗೆ ನಿಗದಿತ ದರಕ್ಕಿಂತ ಅಧಿಕ ವಸೂಲು ಮಾಡಿದರೆ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ. ಪರವಾನಗಿ ಪಡೆದೂ ದಾಸ್ತಾನು ಇಟ್ಟವರು ಅಂಗಡಿಯನ್ನು ಮಾ.31ರಂದು ಬೆಳಗ್ಗೆ  6ರಿಂದ ಮಧ್ಯಾಹ್ನ 3ರವರೆಗೆ ತೆರೆಯಬೇಕು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಸೋಮವಾರ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಕಚೇರಿಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಉಪಸ್ಥಿತಿಯಲ್ಲಿ ಅಧಿಕಾರಿಗಳ ಸಭೆಯ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಇನ್ನು ಸ್ಥಳೀಯಾಡಳಿತ ಮಟ್ಟದ ಟಾಸ್ಕ್ ಫೋರ್ಸ್ ಕೊರೋನ ಹಿನ್ನೆಲೆಯಲ್ಲಿ ಸಕ್ರಿಯವಾಗಿ ಕಾರ್ಯಾಚರಿಸಬೇಕು ಎಂದು ಸೂಚಿಸಿದ ಅವರು, ಬಿಸಿಯೂಟಕ್ಕಾಗಿ ಶಾಲೆಗಳಿಗೆ ಪೂರೈಕೆಯಾದ ಅಕ್ಕಿಯನ್ನು ಪ್ರತಿ ವಿದ್ಯಾರ್ಥಿಗೂ ವಿತರಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಶಿಕ್ಷಕರಿಗೆ ತೊಂದರೆ ಆಗದಂತೆ ಸಾಮಾಜಿಕ ಅಂತರ ಕಾಯ್ದುಕೊಂಡು ವಿತರಣೆ ನಡೆಸಲಾಗುತ್ತದೆ. ಗರ್ಭಿಣಿ, ಬಾಣಂತಿಯರಿಗೆ ಪೌಷ್ಟಿಕಾಂಶ ವಿತರಣೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಸಜೀಪನಡು ಗ್ರಾಮದಲ್ಲಿ ಯಾವುದೇ ಮೂಲಭೂತ ಅವಶ್ಯಕತೆಗಳಿಗೆ ತೊಂದರೆಯಾಗದಂತೆ ಸೂಚನೆ ನೀಡಲಾಗಿದ್ದು, ಕೊರೋನ ಸೋಂಕಿತ ಮಗು ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದರು. ಕೊರೋನ ಹಿನ್ನೆಲೆಯಲ್ಲಿ ಕೃಷಿ ಕಾರ್ಯಗಳಿಗೆ ಅಡ್ಡಿಯಾಗದು. ಕಟಾವು ಯಂತ್ರಗಳ ಸಾಗಾಟಕ್ಕೆ ಪಾಸ್ ನೀಡುವ ಕುರಿತು ಚರ್ಚಿಸಲಾಗಿದೆ ಎಂದವರು ಹೇಳಿದರು.

ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ದ.ಕ.ಸಂಸದ ನಳಿನ್‌ಕುಮಾರ್ ಕಟೀಲು, ಬಂಟ್ವಾಳ ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಆಲಿ, ಬುಡಾ ಅಧ್ಯಕ್ಷ ಬಿ.ದೇವದಾಸ್ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News