ಭಾರತದಲ್ಲಿ ಕೊರೋನ ಸಾಮುದಾಯಿಕವಾಗಿ ಹರಡಿಲ್ಲ: ಕೇಂದ್ರ ಆರೋಗ್ಯ ಸಚಿವಾಲಯ

Update: 2020-03-30 16:30 GMT

ಬರೇಲಿ,ಮಾ.30: ಜಗತ್ತಿನಾದ್ಯಂತ ಮರಣಮೃದಂಗ ಬಾರಿಸುತ್ತಿರುವ ಕೊರೋನ ವೈರಸ್ ಸೋಂಕು ಭಾರತದಲ್ಲಿ ಈಗ ಸ್ಥಳೀಯವಾಗಿ ಹರಡುವ ಹಂತದಲ್ಲೇ ಇದ್ದು, ಸಾಮುದಾಯಿಕವಾಗಿ ಹರಡುತ್ತಿಲ್ಲವೆಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ಸೋಮವಾರ ತಿಳಿಸಿದೆ.

 ಕೊರೋನಾ ಸೋಂಕು ಪೀಡಿತರನ್ನು ಐಸೋಲೇಶನ್ ಕೇಂದ್ರಗಳಿಗೆ ವರ್ಗಾವಣೆ ಗೊಳಿಸುವ ಪ್ರಕ್ರಿಯೆಗಳಿಗೆ ನಿಗದಿಪಡಿಸಿದ ಮಾನದಂಡಗಳ ಕುರಿತಾಗಿ ಆರೋಗ್ಯ ಸಚಿವಾಲಯವು ರವಿವಾರ ಬಿಡುಗಡೆಗೊಳಿಸಿರುವ ದಾಖಲೆಪತ್ರದಲ್ಲಿ ಈ ವಿಷಯ ತಿಳಿಸಿದೆ.

  ಕೊರೋನ ವೈರಸ್ ಸ್ಥಳೀಯವಾಗಿ ಹರಡುವ ಹಂತದಲ್ಲಿ, ವಿದೇಶಗಳಿಗೆ ಪ್ರಯಾಣಿಸಿದವರು ಅಥವಾ ಸೋಂಕಿತರ ಜೊತೆ ಸಂಪರ್ಕ ಹೊಂದಿದ ವ್ಯಕ್ತಿಗಳಿಗೆ ಮಾತ್ರವೇ ಸೋಂಕು ತಗಲುವುದರಿಂದ ಅವರನ್ನು ಸುಲಭವಾಗಿ ಗುರುತಿಸಲು ಸಾಧ್ಯ. ಆದರೆ ಸಮುದಾಯಿಕ ಹಂತದಲ್ಲಿ ರೋಗಿ ಅಥವಾ ರೋಗಶಂಕಿತನ ಜೊತೆ ಯಾವುದೇ ಸಂಪರ್ಕ ಹೊಂದಿರದ ವ್ಯಕ್ತಿಗೂ ರೋಗ ತಗಲುತ್ತದೆ. ಇದನ್ನು ಕೊರೋನ ವೈರಸ್ ಸೋಂಕಿನ ಮೂರನೆ ಹಂತವೆಂದು ಕರೆಯಲಾಗುತ್ತದೆ.

   ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ 24 ತಾಸುಗಳಲ್ಲಿ ಕೊರೋನ ವೈರಸ್ ಸೋಂಕಿನ 92 ಹೊಸ ಪ್ರಕರಣಗಳು ವರದಿಯಾಗಿದ್ದು, ಇದರೊಂದಿಗೆ ದೇಶದಲ್ಲಿ ಸೋಂಕಿತರ ಸಂಖ್ಯೆ 1071ಕ್ಕೇರಿದೆ ಎಂದು ತಿಳಿಸಿದ್ದಾರೆ. ನಾಲ್ವರು ಮೃತಪಟ್ಟಿದ್ದು, ಈ ಮಾರಕ ರೋಗದಿಂದ ಸಾವಿಗೀಡಾದವರ ಸಂಖ್ಯೆ 29ಕ್ಕೇರಿದೆ ಎಂದವರು ಹೇಳಿದ್ದಾರೆ.

  ಭಾರತದಲ್ಲಿ ಸೋಂಕು ಪೀಡಿತರ ಸಂಖ್ಯೆ 100ರಿಂದ 1 ಸಾವಿರಕ್ಕೆ ತಲುಪಲು 12 ದಿಗಳು ಬೇಕಾಯಿತಾದರೆ, ಅತ್ಯುತ್ತಮ ಆರೋಗ್ಯಪಾಲನಾ ಸೌಲಭ್ಯಗಳಿರುವ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಇದೇ ಅವಧಿಯಲ್ಲಿ ಸೋಂಕಿತರ ಸಂಖ್ಯೆಯಲ್ಲಿ 6 ಸಾವಿರದಿಂದ 8 ಸಾವಿರದಷ್ಟು ಹೆಚ್ಚಳವಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News