ಪಂಜ: ಊರಿಗೆ ಆ್ಯಂಬುಲೆನ್ಸ್ ನಲ್ಲಿ ಬಂದ ಯುವಕ; ಆತಂಕಗೊಂಡ ಊರವರಿಂದ ತಡೆ

Update: 2020-03-30 16:54 GMT

ಸುಬ್ರಹ್ಮಣ್ಯ : ರಾಯಚೂರಿನಲ್ಲಿ ಉದ್ಯೋಗದಲ್ಲಿದ್ದ ಪಂಜದ ಯುವಕನೊಬ್ಬ ಮನೆಗೆ ಮರಳಬೇಕೆಂಬ ಇರಾದೆಯಿಂದ ಆ್ಯಂಬುಲೆನ್ಸ್ ನಲ್ಲಿ ಸೋಮವಾರ ಪಂಜ ತಲುದ್ದು, ಆದರೆ ಊರವರು ರೋಗಿಯೆಂದು ಭಾವಿಸಿ ಆತಂಕಕ್ಕೊಳಗಾಗಿ ಆ್ಯಂಬುಲೆನ್ಸ್ಗೆ ತಡೆಯೊಡ್ಡಿದರು. ಅಲ್ಲದೆ ಆತಂಕದಿಂದ ಪೊಲೀಸರಿಗೆ, ವೈದ್ಯಾಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮಾಹಿತಿ ನೀಡಿದರು. ಅಧಿಕಾರಿಗಳು ಆಗಮಿಸಿ ಯುವಕನನ್ನು ವಿಚಾರಿಸಿ, ಕಡ್ಡಾಯವಾಗಿ 14 ದಿನ ಕ್ವಾರಂಟೈನ್ ನಲ್ಲಿ ಇರಲು ಸೂಚಿಸಿದ ಘಟನೆ ಪಂಜದಲ್ಲಿ ಸೋಮವಾರ ನಡೆದಿದೆ.

ಐವತ್ತೊಕ್ಲು ಗ್ರಾಮದ ಅಳ್ಪೆಯ ಯುವಕನೋರ್ವ ರಾಯಚೂರಿನಲ್ಲಿ ಉದ್ಯೋಗದಲ್ಲಿದ್ದ ಪಂಜ ಅಳ್ಪೆಯ ವಿಜಯ್ ಅಳ್ಪೆ(27) ಅವರು ಆ್ಯಂಬುಲೆನ್ಸ್ನಲ್ಲಿ ಸೋಮವಾರ ಅಳ್ಪೆಯ ತನ್ನ ಮನೆಗೆ ಬಂದರು. ಊರಿಗೆ ಆ್ಯಂಬುಲೆನ್ಸ್ ಆಗಮಿಸಿದ ಸುದ್ದಿ ತಿಳಿದ ಊರವರು ಆತಂಕಗೊಂಡರು. ಆತನನ್ನು ಕರೆತಂದ ಆ್ಯಂಬುಲೆನ್ಸ್ ಅನ್ನು ಹೊರಗಡೆ ಬಿಡದೆ ರಸ್ತೆಗೆ ತಡೆ ಹಾಕುವ ಮೂಲಕ ತಡೆದರು. ಅಲ್ಲದೆ ಅಧಿಕಾರಿ ಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಸುದ್ದಿ ತಲುಪಿಸಿದರು. ತಕ್ಷಣವೇ ಸುಬ್ರಹ್ಮಣ್ಯ ಠಾಣಾಧಿಕಾರಿ ಓಮನಾ, ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮಂಜುನಾಥ್, ಪಂಜ ಗ್ರಾ.ಪಂ.ಅಧ್ಯಕ್ಷ ಕಾರ್ಯಪ್ಪ ಗೌಡ ಚಿದ್ಗಲ್ ಸ್ಥಳಕ್ಕಾಗಮಿಸಿ ವಿಜಯ್‍ರನ್ನು ವಿಚಾರಿಸಿದರು.

ಲಾಕ್ ಡೌನ್ ಹಿನ್ನೆಲೆಯಲ್ಲಿ ಊರಿಗೆ ಮರಳಲು ವಾಹನ ಸೌಲಭ್ಯವಿರಲಿಲ್ಲ. ಆ ಕಾರಣದಿಂದ ಆ್ಯಂಬುಲೆನ್ಸ್ ಅನ್ನು ಬಾಡಿಗೆ ಪಡೆದು ಬಂದೆ. ತಾನು ಮನೆಗೆ ಮರಳಲು ಈ ರೀತಿ ಮಾಡಿರುವುದಾಗಿ ವಿಚಾರಿಸಿದಾಗ ಅಧಿಕಾರಿಗಳಲ್ಲಿ ವಿಜಯ್ ತಿಳಿಸಿದರು. ನಂತರ ವೈದ್ಯಾಧಿಕಾರಿ ಡಾ. ಮಂಜುನಾಥ್ ಅವರನ್ನು ತಪಾಸಣೆ ಮಾಡಿದರು. ಆದರೆ ವಿಜಯ್‍ರಲ್ಲಿ ಯಾವುದೇ ರೋಗ ಲಕ್ಷಣಗಳು ಕಂಡು ಬರಲಿಲ್ಲ. ಬಳಿಕ ಕಡ್ಡಾಯವಾಗಿ 14 ದಿನ ಹೋಂ ಕ್ವಾರೆಂಟೈನ್‍ನಲ್ಲಿರಲು ಸೂಚಿಸಿ ಅಧಿಕಾರಿ ವರ್ಗ ಮತ್ತು ಜನಪ್ರತಿನಿಧಿಗಳು ತೆರಳಿದರು. ಗ್ರಾಮಸ್ಥರ ಆತಂಕ ದೂರವಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News