ದಿನಸಿ ಸಾಮಗ್ರಿ‌ಗಳ ಖರೀದಿಗೆ ಸಂಬಂಧಿಸಿ ಚರ್ಚೆ: ದ.ಕ. ಜಿಲ್ಲಾ ಉಸ್ತುವಾರಿ ‌ಕಾರ್ಯದರ್ಶಿಗೆ ‌ಮನವಿ

Update: 2020-03-31 17:16 GMT

ಮಂಗಳೂರು, ಮಾ.31: ದ.ಕ.ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಕೊರೋನ‌ ನಿಯಂತ್ರಣ ಕುರಿತ ನೋಡಲ್ ಅಧಿಕಾರಿ ಪೊನ್ನುರಾಜ್ ಅವರನ್ನು ಮಂಗಳವಾರ ಕಾಂಗ್ರೆಸ್‌ ನಿಯೋಗ ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಭೇಟಿಯಾಗಿ‌ ದಿನಸಿ ಸಾಮಗ್ರಿ‌ಗಳ ಖರೀದಿಗೆ ಸಂಬಂಧಿಸಿದಂತೆ ಎದುರಾದ ಸಮಸ್ಯೆಗಳ ಕುರಿತು ಚರ್ಚಿಸಿ ಅವುಗಳ ಪರಿಹಾರಕ್ಕಾಗಿ ಮನವಿ ಸಲ್ಲಿಸಿತು.

ಮೂರ್ನಾಲ್ಕು ದಿನ ಮನೆಯಲ್ಲೇ ಕೂರಿಸಿ ಏಕಾಏಕಿ ದಿನಸಿ ಅಂಗಡಿಗಳಲ್ಲಿ ಸಾಮಗ್ರಿ ಖರೀದಿಗೆ ಅವಕಾಶ ನೀಡುವಾಗ ಜನರು ಗಾಬರಿಯಿಂದ ಆಹಾರ ಸಾಮಗ್ರಿ ಖರೀದಿಗೆ‌ ಮುಗಿಬೀಳುವುದು ಸಹಜ. ಬಹುತೇಕ ಅಂಗಡಿಗಳಲ್ಲಿ ಸಾಮಗ್ರಿಗಳು ದಾಸ್ತಾನಿಲ್ಲ. ಅವುಗಳ ಪೂರೈಕೆಗೂ ಕ್ರಮ ಜರುಗಿಸಿಲ್ಲ. ಜನರು ಆಹಾರ ಸಾಮಗ್ರಿಗಳ ಕೊರತೆಯಾಗಬಹುದು ಎಂದು ಆತಂಕಕ್ಕೆ ಒಳಗಾಗುತ್ತಾರೆ. ಹಾಗಾಗಿ ಮೊದಲು ಎಲ್ಲಾ ಅಂಗಡಿಗಳಲ್ಲಿ ಆಹಾರ ದಾಸ್ತಾನು ಇರುವಂತೆ ನೋಡಿಕೊಳ್ಳಬೇಕು. ಆ ಬಳಿಕ ಪ್ರತೀ ದಿನ 4 ಗಂಟೆಗಳು ಅಂಗಡಿಗಳನ್ನು ತೆರೆದಿಡುವಂತೆ ಮತ್ತು ಆ ವೇಳೆ ಸಾಮಗ್ರಿ ಖರೀದಿಗೆ ಅವಕಾಶ ನೀಡಬೇಕು. ಈ‌ ಸಂದರ್ಭ‌ ಲಾಕ್‌ಡೌ‌ನ್ ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮಕೈಗೊಳ್ಳುವುದಕ್ಕೆ ಪಕ್ಷದ ಸಹಮತವಿದೆ  ಎಂದು ಕಾಂಗ್ರೆಸ್ ಮುಖಂಡರು ಹೇಳಿದರು.

ನಿಯೋಗದಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮನಪಾ ವಿಪಕ್ಷ ನಾಯಕ ಅಬ್ದುರ್ರವೂಫ್, ಕಾರ್ಪೊರೇಟರ್‌ಗಳಾದ ಶಶಿಧರ್ ಹೆಗ್ಡೆ, ನವೀನ್ ಡಿಸೋಜ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News