ಉಡುಪಿ ಜಿಲ್ಲೆಯಾದ್ಯಂತ 32 ಚೆಕ್‌ಪೋಸ್ಟ್: ಪೊಲೀಸರಿಂದ ತೀವ್ರ ತಪಾಸಣೆ

Update: 2020-03-31 11:08 GMT

ಉಡುಪಿ, ಮಾ.31: ಲಾಕ್‌ಡೌನ್ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಾದ್ಯಂತ ಗಡಿ ಪ್ರದೇಶ ಸೇರಿದಂತೆ ವಿವಿಧ ಕಡೆಗಳಲ್ಲಿ ಸ್ಥಾಪಿಸಲಾಗಿರುವ ಒಟ್ಟು 32 ಚೆಕ್‌ಪೋಸ್ಟ್‌ಗಳ ಮೂಲಕ ಅನವಶ್ಯಕವಾಗಿ ಸಂಚರಿಸುವ ವಾಹನಗಳನ್ನು ತಪಾ ಸಣೆ ಮಾಡುವ ಕಾರ್ಯ ಪೊಲೀಸರಿಂದ ನಡೆಯುತ್ತಿದೆ.

ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಗಡಿ ಪ್ರದೇಶಗಳಲ್ಲಿ ಒಟ್ಟು ಎಂಟು ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದ್ದು, ಅದೇ ರೀತಿ ಜಿಲ್ಲೆಯ ಒಳಗೆ 24 ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಲಾಗಿದೆ. ಈ ಚೆಕ್ ಪೋಸ್ಟ್‌ಗಳು ರಾತ್ರಿಹಗಲು ಕಾರ್ಯಾಚರಿಸುತ್ತಿದೆ.

ಅದೇ ರೀತಿ ಕೆಲವು ಕಡೆಗಳಲ್ಲಿ ಬೆಳಗ್ಗೆ 11ರ ಬಳಿಕ ಅನಾವಶ್ಯಕವಾಗಿ ತಿರುಗಾಡುವ ವಾಹನಗಳ ವಿರುದ್ಧ ಕ್ರಮ ಜರಗಿಸುವ ನಿಟ್ಟಿನಲ್ಲಿ ಕೆಲವು ಕಡೆ ತಾತ್ಕಾಲಿಕ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿ ತಪಾಸಣೆ ನಡೆಸಲಾಗುತ್ತಿದೆ. ಇವುಗಳು ಕೇವಲ ಹಗಲಿನಲ್ಲಿ ಮಾತ್ರ ಕಾರ್ಯಾಚರಿಸುತ್ತವೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ತಿಳಿಸಿದ್ದಾರೆ.

ಇಂದು ಉಡುಪಿ ನಗರ ಠಾಣೆ ಪೊಲೀಸರು ಜಿಲ್ಲಾಧಿಕಾರಿ ನಿರ್ದೇಶನ ದಂತೆ ಉಡುಪಿ- ಮಣಿಪಾಲ ರಾಷ್ಟ್ರೀಯ ಹೆದ್ದಾರಿಯ ಕಡಿಯಾಳಿಯಲ್ಲಿ ತಾತ್ಕಾಲಿಕ ಚೆಕ್‌ಪೋಸ್ಟ್‌ನ್ನು ಸ್ಥಾಪಿಸಿ ವಾಹನಗಳನ್ನು ತಪಾಸಣೆ ಮಾಡುವ ಕಾರ್ಯ ನಡೆಸಿದರು. ಅಗತ್ಯ ವಸ್ತುಗಳನ್ನು ಸಾಗಿಸುವ ಲಾರಿ, ಟೆಂಪೋ ಹಾಗೂ ಅಂಬ್ಯುಲೆನ್ಸ್‌ಗಳಿಗೆ ವಿನಾಯಿತಿ ನೀಡಿ, ಉಳಿದಂತೆ ಕಾರು, ದ್ವಿಚಕ್ರ ವಾಹನ ಗಳನ್ನು ತಪಾಸಣೆಗೆ ಒಳಪಡಿಸಿದರು.

ಉಡುಪಿ ನಗರ ಠಾಣಾಧಿಕಾರಿ ಶಕ್ತಿವೇಲು ಇ. ನೇತೃತ್ವದಲ್ಲಿ ಪೊಲೀಸರು ಪ್ರತಿಯೊಂದು ವಾಹನಗಳ ಚಾಲಕರು ಹಾಗೂ ಸವಾರರಲ್ಲಿ ಹೊರಗಡೆ ಬಂದ ಉದ್ದೇಶಗಳ ಬಗ್ಗೆ ವಿಚಾರಿಸಿ, ಐಡಿ ದಾಖಲೆಗಳನ್ನು ಪರಿಶೀಲನೆ ನಡೆಸಿದರು. ವಿನಾಕಾರಣ ಹೊರಗಡೆ ಬಂದ ವಾಹನಗಳನ್ನು ಚಾಲಕರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಯಿತು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News