ಲಾಕ್ ಡೌನ್: ವಲಸೆ ಕಾರ್ಮಿಕರ ಬಗ್ಗೆ ಮಾಹಿತಿ ನೀಡಿದ ಯುವಕನ ಥಳಿಸಿ ಹತ್ಯೆ

Update: 2020-03-31 11:03 GMT

ಪಾಟ್ನಾ: ಇಬ್ಬರು ವಲಸಿಗ ಕಾರ್ಮಿಕರು ಮಹಾರಾಷ್ಟ್ರದಿಂದ  ಯಾವುದೇ ವೈದ್ಯಕೀಯ ಪರೀಕ್ಷೆಗೊಳಗಾಗದೆ ಗ್ರಾಮಕ್ಕೆ ವಾಪಸಾಗುತ್ತಿದ್ದಾರೆಂದು ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ 20 ವರ್ಷದ ಯುವಕನನ್ನು ಬಿಹಾರದ ಸಿತಾಮರ್ಹಿ ಜಿಲ್ಲೆಯಲ್ಲಿ ಸೋಮವಾರ ಸಂಜೆ ಹತ್ಯೆಗೈಯ್ಯಲಾಗಿದೆ.

ಈ ಘಟನೆ ಸಂಬಂಧ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ರುನಿ ಸೈದ್ಪುರ್ ಎಂಬಲ್ಲಿನ ಮಧೌಲ್ ಗ್ರಾಮದ ನಿವಾಸಿ ಬಬ್ಲಿ ಕುಮಾರ್  ಎಂಬಾತನೇ ಕೊಲೆಗೀಡಾದ ಯುವಕ.

ಗ್ರಾಮದಲ್ಲಿ ಸ್ಥಾಪಿಸಲಾಗದ್ದ ಸಹಾಯವಾಣಿಗೆ ಕರೆ ಮಾಡಿದ್ದ ಆತ ಮಹಾರಾಷ್ಟ್ರದಲ್ಲಿ ಯಾವುದೇ ತಪಾಸಣೆಗೊಳಗಾಗದೆ ಗ್ರಾಮದ  ಮುನ್ನಾ ಮಹತೋ ಹಾಗೂ ಸುಧೀರ್ ಕುಮಾರ್ ಎಂಬವರು ವಾಪಸಾಗುತ್ತಿದ್ದಾರೆ ಎಂದು ತಿಳಿಸಿದ್ದ. ನಂತರ ವೈದ್ಯಕೀಯ ತಂಡವೊಂದು ಆ ಇಬ್ಬರ ತಪಾಸಣೆ ನಡೆಸಿ ಅವರಲ್ಲಿ ಕೋವಿಡ್-19 ಲಕ್ಷಣಗಳಿಲ್ಲ ಎಂದು ದೃಢಪಡಿಸಿತ್ತು.

ವೈದ್ಯರ ತಂಡ ಮರಳುತ್ತಿದ್ದಂತೆಯೇ ಆ ಇಬ್ಬರು ಹಾಗೂ ಅವರ ನಾಲ್ಕು ಮಂದಿ ಕುಟುಂಬ ಸದಸ್ಯರು ಬಬ್ಲು ಕುಮಾರ್‍ನಿಗೆ  ನಿರ್ದಯವಾಗಿ ಥಳಿಸಿದ್ದರು. ಆ ಸಂದರ್ಭ ಲಾಕ್‍ ಡೌನ್ ಇದ್ದುದರಿಂದ ಗ್ರಾಮಸ್ಥರ್ಯಾರಿಗೂ ಈ ವಿಚಾರ ತಿಳಿದು ಬಂದಿರಲಿಲ್ಲ. ನಂತರ ಬಬ್ಲು ಕುಮಾರ್‍ ನನ್ನು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಆದರೆ ಆತನ ಸ್ಥಿತಿ ಬಿಗಡಾಯಿಸಿದ್ದರಿಂದ ಆತನನ್ನು ಎಸ್‍ಕೆಎಂ ಕಾಲೇಜು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಆತ ಮೃತಪಟ್ಟಿದ್ದಾನೆಂದು ವೈದ್ಯರು ಘೋಷಿಸಿದ್ದರು.

ಆತನ ತಂದೆ ನೀಡಿದ ದೂರಿನಲ್ಲಿ ಒಟ್ಟು ಏಳು ಮಂದಿಯನ್ನು ಹೆಸರಿಸಿದ್ದರು. ಅವರ ಪೈಕಿ ಮುನ್ನಾ ಹಾಗೂ ಸುಧೀರ್ ಎಂಬವರನ್ನು ಬಂಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News