ಲಾಕ್ ಡೌನ್ ವಿಫಲತೆಗೆ ದ.ಕ. ಜಿಲ್ಲಾಡಳಿತದ ತಪ್ಪು ನಡೆಗಳೇ ನೇರ ಕಾರಣ : ಡಿವೈಎಫ್ಐ

Update: 2020-03-31 11:03 GMT

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾಡಳಿತ ಲಾಕ್ ಡೌನ್ ಸಂಬಂಧಿಸಿ ತೆಗೆದುಕೊಳ್ಳುತ್ತಿರುವ ಪ್ರಾಯೋಗಿಕವಲ್ಲದ, ದೂರದೃಷ್ಟಿಯಿಲ್ಲದ ಕ್ರಮಗಳು ಜನ ಜೀವನದ ಮೇಲೆ, ಕೊರೋನ ವೈರಸ್ ತಡೆಯುವ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ನಾಗರಿಕರಲ್ಲಿ ಹತಾಷೆಗೆ ಕಾರಣವಾಗುತ್ತಿದೆ. ಜಿಲ್ಲಾಡಳಿತದ ಇಂತಹ ತಪ್ಪಾದ, ಏಕಮುಖ, ಸರ್ವಾಧಿಕಾರಿ ಕ್ರಮಗಳನ್ನು ಡಿವೈಎಫ್ಐ ತೀವ್ರವಾಗಿ ಖಂಡಿಸುತ್ತದೆ ಹಾಗೂ ರಾಜ್ಯ, ಕೇಂದ್ರ ಸರಕಾರದ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸುವಂತೆ ಆಗ್ರಹಿಸುತ್ತದೆ ಎಂದು ಡಿವೈಎಫ್ಐ ಕರ್ನಾಟಕ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.

ರಾಜ್ಯಾದ್ಯಂತ ನಡೆಯುತ್ತಿರುವ ಲಾಕ್ ಡೌನ್ ನಿಯಮಗಳಿಗೆ ವಿರುದ್ಧವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸತತ ಮೂರು ದಿನಗಳ ಕಾಲ ಪೂರ್ಣ ಪ್ರಮಾಣದ ಬಂದ್ ಘೋಷಿಸಿ, ಅಗತ್ಯ ವಸ್ತುಗಳ ಅಭಾವ ಸೃಷ್ಟಿ ಮಾಡಿ, ನಾಲ್ಕನೇ ದಿನ ಅಲ್ಪ ಅವಧಿಗೆ ದಿನಸಿ ಅಂಗಡಿಗಳನ್ನು, ಮಾರು ಕಟ್ಟೆಗಳನ್ನು ತೆರೆಯಲು ಅವಕಾಶ ಮಾಡಿಕೊಟ್ಟಿರುವುದು ದೊಡ್ಡ ಪ್ರಮಾಣದ ಜನ ಜಂಗುಳಿಗೆ ಕಾರಣವಾಗಿದೆ. ಇದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಲಾಕ್ ಡೌನ್ ಉದ್ದೇಶ ದಯನೀಯ ವೈಫಲ್ಯ ಕಾಣುವಂತಾಗಿದೆ. ಲಾಕ್ ಡೌನ್ ಉದ್ದೇಶ ಜನ ಗುಂಪು ಸೇರದಂತೆ, ಬೆರೆಯದಂತೆ ತಡೆಯುವುದು. ಆದರೆ ಸತತ ಮೂರು ದಿನಗಳ ಬಂದ್, ಮುಂದೆ  ಆಹಾರ ಸಾಮಾಗ್ರಿಗಳ ಲಭ್ಯತೆಯ ಅನಿಶ್ಚಿತತೆ ಜನರು ಅಂಗಡಿ, ಮಾರುಕಟ್ಟೆಗಳಿಗೆ ಮುಗಿ ಬೀಳುವಂತೆ ಮಾಡುತ್ತಿದೆ. ಆನ್ ಲೈನ್ ವ್ಯಾಪಾರಿಗಳ ಮೂಲಕ, ಸ್ಥಳೀಯ ಅಂಗಡಿಗಳಿಂದ ವಾಟ್ಸಪ್ ಸಂದೇಶಗಳ ಮೂಲಕ ಅಗತ್ಯ ವಸ್ತುಗಳನ್ನು ಮನೆ ಮನೆ ತಲುಪಿಸುವ ಕುರಿತು ಜಿಲ್ಲಾಡಳಿತ ಪ್ರಕಟನೆ ನೀಡಿದ್ದರೂ ಕಾರ್ಯಸಾಧುವಾದ ಯೋಜನೆಗಳನ್ನು ರೂಪಿಸಿರುವುದು ಕಂಡು ಬರುತ್ತಿಲ್ಲ. ಬೀದಿಬದಿ ವ್ಯಾಪಾರಸ್ಥರನ್ನು ವಾರ್ಡ್ ವಾರು ತರಕಾರಿ, ಹಣ್ಣುಹಂಪಲು ಮನೆ ಮನೆ ವಿತರಿಸುವಂತೆ ವಿಶೇಷ ಸಭೆ ನಡೆಸಿ ತೀರ್ಮಾನಿಸಿದ್ದರೂ, ಆಡಳಿತ ಪಕ್ಷದ ಜನಪ್ರತಿನಿಧಿಗಳ ಒತ್ತಡಕ್ಕೆ ಬಲಿ ಬಿದ್ದು ಅದನ್ನು ಏಕಾಏಕಿ ಕೈ ಬಿಟ್ಟಿರುವುದು ಜಿಲ್ಲಾಡಳಿತ ದೂರದೃಷ್ಟಿ ಇಟ್ಟು ಕೆಲಸ ಮಾಡುತ್ತಿಲ್ಲ, ರಾಜಕೀಯ ಒತ್ತಡಕ್ಕೆ ತಲೆಬಾಗುತ್ತಿದೆ ಎಂಬುದನ್ನು ತೋರಿಸುತ್ತದೆ. ವಲಸೆ ಕಾರ್ಮಿಕರಿಗೆ, ನಿರ್ಗತಿಕರಿಗೆ ಆಹಾರ ಸರಬರಾಜಿನಲ್ಲೂ ವೈಫಲ್ಯ ಎದ್ದು ಕಾಣುತ್ತಿದೆ. ಇದು ಜನಸಾಮಾನ್ಯರಲ್ಲಿ ಹತಾಷೆಗೆ ಕಾರಣವಾಗುತ್ತಿದೆ.

ಲಾಕ್ ಡೌನ್, ಸಾಮಾಜಿಕ ಅಂತರ ಕಾಪಾಡುವಿಕೆ ಯಶಸ್ವಿಯಾಗಬೇಕಾದರೆ, ಜಿಲ್ಲಾಡಳಿತ ರಾಜಕೀಯ ಒತ್ತಡ ಮೀರಿ ಕೆಲಸ ಮಾಡಬೇಕು. ಸಾಧ್ಯವಾದರೆ ಕೇಂದ್ರ ಮಾರುಕಟ್ಟೆಗಳನ್ನು ವಿಶಾಲವಾದ ತೆರೆದ ಮೈದಾನಗಳಿಗೆ ಸ್ಥಳಾಂತರಿಸಬೇಕು. ದಿನ ಬಳಕೆಯ ಅಂಗಡಿಗಳನ್ನು ಇಡೀ ದಿನ ಹೆಚ್ವಿನ ಅವಧಿಗೆ ತೆರೆದಿಡುವುದು, ಅದೇ ಸಂದರ್ಭ ಪರ್ಯಾಯವಾಗಿ ಆನ್ ಲೈನ್ ಮೂಲಕ ಮನೆ ಮನೆಗೆ ದಿನಬಳಕೆ ವಸ್ತುಗಳು ತಲುಪುವ ಯೋಜನೆ ರೂಪಿಸುವುದು, ಇದು ಮಾರುಕಟ್ಟೆ, ಅಂಗಡಿಗಳ ಮೇಲೆ ಜನರ ಅವಲಂಬನೆ ಕಡಿಯಾಗುವಂತೆ ಮಾಡುತ್ತದೆ.  ಇದರ ಹೊರತು ಮತ್ತಷ್ಟು ದಿನಗಳ ಸಂಪೂರ್ಣ ಬಂದ್ ಗೆ ಮುಂದಾದರೆ ಇನ್ನಷ್ಟು ಅವ್ಯವಸ್ಥೆ, ಗಂಭೀರ ಸ್ಥಿತಿ ಉದ್ಭವವಾಗಲಿದೆ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News