ಕೊರೋನ: ವೆಚ್ಚ ಸರಿದೂಗಿಸಲು ಉದ್ಯೋಗಿಗಳ ಶೇ.60 ವೇತನ ಕಡಿತಕ್ಕೆ ಮುಂದಾಗಿವೆ ಈ ರಾಜ್ಯಗಳು

Update: 2020-03-31 11:34 GMT

ಹೊಸದಿಲ್ಲಿ: ಕೊರೋನ ವೈರಸ್ ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಹಾಗೂ ರೋಗಿಗಳಿಗೆ ಚಿಕಿತ್ಸೆ ನೀಡಲು ಸರಕಾರಗಳು ಮಾಡಬೇಕಾಗಿರುವ ಖರ್ಚುವೆಚ್ಚಗಳನ್ನು ಸರಿದೂಗಿಸಲು ಮಹಾರಾಷ್ಟ್ರ ಮತ್ತು ತೆಲಂಗಾಣ ಸರಕಾರಗಳು ತಮ್ಮ ಮುಖ್ಯಮಂತ್ರಿ, ಸಚಿವರು ಹಾಗೂ ಸರಕಾರಿ ಉದ್ಯೋಗಿಗಳ ವೇತನ ಕಡಿತ ಮಾಡಲು ನಿರ್ಧರಿಸಿವೆ.

"ಮುಖ್ಯಮಂತ್ರಿ, ರಾಜ್ಯ ಸಚಿವರು, ಶಾಸಕರು, ರಾಜ್ಯ ನಿಗಮಗಳ ಅಧ್ಯಕ್ಷರು, ಸ್ಥಳೀಯಾಡಳಿತಗಳ ಪ್ರತಿನಿಧಿಗಳ ವೇತನದಲ್ಲಿ ಶೇ.75ರಷ್ಟು ಕಡಿತವಾಗಲಿದೆ'' ಎಂದು ತೆಲಂಗಾಣ ಸಿಎಂ ಕೆ ಸಿ ರಾವ್ ಹೇಳಿದ್ದಾರೆ.

ಉಳಿದಂತೆ ರಾಜ್ಯದ ಆಡಳಿತಾತ್ಮಕ, ಪೊಲೀಸ್ ಹಾಗೂ ವಿದೇಶಾಂಗ ಸೇವೆಗಳ ಅಧಿಕಾರಿಗಳು ಹಾಗೂ ಇತರ ಕೇಂದ್ರ ಸರಕಾರಿ ಅಧಿಕಾರಿಗಳ ವೇತನಗಳಲ್ಲಿ ಶೇ. 60ರಷ್ಟು ಕಡಿತವಾಗಲಿದೆ. ಎಲ್ಲಾ ಇತರ ಸರಕಾರಿ ಉದ್ಯೋಗಿಗಳ ವೇತನ ಶೇ. 50ರಷ್ಟು  ಕಡಿತಗೊಳ್ಳಲಿದೆ. ಉಳಿದಂತೆ ನಾಲ್ಕನೇ ದರ್ಜೆ ನೌಕರರು, ಹೊರಗುತ್ತಿಗೆ ಹಾಗೂ ಗುತ್ತಿಗೆ ನೌಕರರ ವೇತನಗಳಲ್ಲಿ ಶೇ. 10ರಷ್ಟು ಕಡಿತ ಮಾಡಲಾಗುವುದು'' ಎಂದು ರಾವ್ ತಿಳಿಸಿದ್ದಾರೆ.

ಲಾಕ್‍ಡೌನ್‍ ನಿಂದಾಗಿ ತೆಲಂಗಾಣ ಕಂದಾಯ ಇಲಾಖೆ 12,000 ಕೋಟಿ ರೂ. ನಷ್ಟ ಅನುಭವಿಸಲಿದೆ ಎಂದು ಅವರು ಈ ಹಿಂದೆಯೇ ತಿಳಿಸಿದ್ದರು.

ಮಹಾರಾಷ್ಟ್ರದಲ್ಲಿ ಸಿಎಂ ಹಾಗೂ ಇತರ ಶಾಸಕರ ವೇತನಗಳಲ್ಲಿ ಶೇ 60ರಷ್ಟು ಕಡಿತ ಮಾಡಲಾಗುವುದು ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ತಿಳಿಸಿದ್ದಾರೆ. ಎ ಮತ್ತು ಬಿ ದರ್ಜೆಯ ಅಧಿಕಾರಿಗಳ ವೇತನದಲ್ಲಿ ಶೇ 50ರಷ್ಟು ಕಡಿತವಾಗಲಿದ್ದರೆ, ಡಿ ದರ್ಜೆ ಉದ್ಯೋಗಿಗಳ ವೇತನದಲ್ಲಿ ಕಡಿತವಿರುವುದಿಲ್ಲ ಎಂದು ಸಿಎಂ ತಿಳಿಸಿದ್ದಾರೆ. ಈ ಕಡಿತ ಕೇವಲ ಮಾರ್ಚ್ ತಿಂಗಳ ವೇತನಕ್ಕೆ ಅನ್ವಯಿಸುತ್ತದೆ ಎಂದು ಮಹಾರಾಷ್ಟ್ರ ವಿತ್ತ ಸಚಿವ ಅಜಿತ್ ಪವಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News