×
Ad

ಬುಧವಾರದಿಂದ ಬೆಳಗ್ಗೆ 7ರಿಂದ 12 ಗಂಟೆಯವರೆಗೆ ದಿನಸಿ, ತರಕಾರಿ ಅಂಗಡಿಗಳು ತೆರೆಯಲು ಅವಕಾಶ

Update: 2020-03-31 18:50 IST

ಮಂಗಳೂರು, ಮಾ.31: ಕೊರೋನ ತಡೆಗಟ್ಟುವ ಸಲುವಾಗಿ ಸತತ ಮೂರು ದಿನಗಳ ಲಾಕ್‌ಡೌನ್‌ಗೊಳಗಾಗಿದ್ದ ಜನರು ಮಂಗಳವಾರ ದಿನಸಿ ಸಾಮಗ್ರಿ ಖರೀದಿಸಲು ಮುಗಿಬಿದ್ದ ಹಿನ್ನೆಲೆಯಲ್ಲಿ ಉಂಟಾದ ಗೊಂದಲಗಳ ಬಳಿಕ ಎಚ್ಚೆತ್ತುಕೊಂಡ ದ.ಕ. ಜಿಲ್ಲಾಡಳಿತ ಎ.1ರಿಂದ ಬೆಳಗ್ಗೆ 7ರಿಂದ ಮಧ್ಯಾಹ್ನ 12ರವರೆಗೆ ದಿನಸಿ ಅಂಗಡಿ ತೆರೆಯುವುದಕ್ಕೆ ಅನುಮತಿ ನೀಡಿದೆ.

ದ.ಕ.ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಸಭೆಯ ಬಳಿಕ ಈ ಕುರಿತು ವೀಡಿಯೊ ಸಂದೇಶ ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಎಲ್ಲಾ ದಿನಸಿ ಅಂಗಡಿ, ತರಕಾರಿ, ಹಣ್ಣಿನಂಗಡಿಗಳು ತೆರೆಯಬಹುದು, ಹಾಲು, ಮೆಡಿಕಲ್, ಗ್ಯಾಸ್ ವಿತರಣೆ, ಪೆಟ್ರೋಲ್, ಬ್ಯಾಂಕ್‌ಗಳು ಎಂದಿನಂತೆ ತೆರೆಯಬಹುದು ಎಂದಿದ್ದಾರೆ.

ನಗರದಲ್ಲಿ ಜನಸಂದಣಿ ನಿಯಂತ್ರಿಸುವ ಸಲುವಾಗಿ ಸೆಂಟ್ರಲ್ ಮಾರ್ಕೆಟ್ ಅನ್ನು ತಾತ್ಕಾಲಿಕವಾಗಿ ಹಗಲು ವೇಳೆ ಸಂಪೂರ್ಣ ಬಂದ್ ಮಾಡಲು ನಿರ್ಧರಿಸಲಾಗಿದೆ. ರಾತ್ರಿ 11 ರಿಂದ ಬೆಳಗ್ಗೆ 4ರವರೆಗೆ ಸೆಂಟ್ರಲ್ ಮಾರ್ಕೆಟ್‌ನಲ್ಲಿರುವ ಹೋಲ್ಸೇಲ್ ಅಂಗಡಿಯವರಿಗೆ ಮಾತ್ರ ತೆರೆಯಲು ಅನುಮತಿ ನೀಡಲಾಗಿದೆ.

ನಗರದ ವಿವಿಧ ಪ್ರದೇಶಗಳ ರಿಟೇಲ್ ವ್ಯಾಪಾರಸ್ಥರು ಮಾತ್ರ ಈ ಸಂದರ್ಭದಲ್ಲಿ ಇಲ್ಲಿಗೆ ಬಂದು ಖರೀದಿಸಬಹುದು. ಆದರೆ ಸೆಂಟ್ರಲ್ ಮಾರ್ಕೆಟ್‌ನಲ್ಲಿರುವ ರಿಟೇಲ್ ಅಂಗಡಿಗಳನ್ನು ಸಂಪೂರ್ಣವಾಗಿ ಬಂದ್ ಮಾಡಲು ನಿರ್ಧರಿಸಲಾಗಿದೆ. ಯಾವುದೇ ಸಾರ್ವಜನಿಕರಿಗೆ ಸೆಂಟ್ರಲ್ ಮಾರ್ಕೆಟ್ ಪ್ರವೇಶ ನಿರ್ಬಂಧಿಸಲಾಗಿದೆ. ಸಾರ್ವಜನಿಕರು ಮಾರ್ಕೆಟ್ ಪ್ರವೇಶಿಸದಂತೆ ಬಿಗಿ ಪೊಲೀಸ್ ಭದ್ರತೆ ಒದಗಿಸಲು ನಿರ್ಧರಿಸಲಾಗಿದೆ. ತೀವ್ರ ಇಕ್ಕಟ್ಟಿನಲ್ಲಿ ಸುರತ್ಕಲ್ ಮಾರುಕಟ್ಟೆಯನ್ನು ಸಂಪೂರ್ಣ ಮುಚ್ಚಲು ನಿರ್ಧರಿಸಲಾಗಿದೆ ಎಂದು ಕೋಟ ತಿಳಿಸಿದರು.

ಗ್ರಾಹಕರು ಸರದಿ ಸಾಲಲ್ಲಿ ನಿಂತಿದ್ದರೆ ಅಂಗಡಿ ಮಾಲಕರು ಅವರ ಫೋನ್ ನಂಬರ್ ಪಡೆದು ಸಾಧ್ಯವಾದರೆ ಅದೇ ದಿನ ಅಥವಾ ಮರುದಿನ ಸಾಮಾಗ್ರಿಗಳನ್ನು ಮನೆಗೆ ತಲಪಿಸುವ ವ್ಯವಸ್ಥೆ ಮಾಡಬೇಕು, ಈ ಮೂಲಕ ಕೊರೋನ ಸೋಂಕು ಪಸರಿಸದಂತೆ ಕ್ರಮ ವಹಿಸಬೇಕು. ಸಾಮಾಜಿಕ ಅಂತರ ಕಾಪಾಡುವುದು ಮಾತ್ರವೇ ಕೊರೋನ ತಡೆಗೆ ಇರುವ ಏಕೈಕ ಔಷಧಿ ಎಂದು ಕೋಟ ನುಡಿದರು.

ಶಾಸಕರಾದ ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ, ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್, ಪೊಲೀಸ್ ಆಯುಕ್ತ ಡಾ.ಪಿ.ಎಸ್. ಹರ್ಷ, ಸೆಂಟ್ರಲ್ ಮಾರ್ಕೆಟ್ ಹಾಗೂ ಸುರತ್ಕಲ್ ಮಾರ್ಕೆಟ್ ವ್ಯಾಪಾರಸ್ಥರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News