ಕಾಸರಗೋಡು : ಇಂದು ಇಬ್ಬರಲ್ಲಿ ಕೊರೋನ ಸೋಂಕು ದೃಢ

Update: 2020-03-31 13:35 GMT

ಕಾಸರಗೋಡು : ಜಿಲ್ಲೆಯಲ್ಲಿ ಮಂಗಳವಾರ ಎರಡು ಕೊರೋನ ಸೋಂಕು ದೃಢಪಟ್ಟಿದ್ದು,  ಇದರಿಂದ ಸೋಂಕಿತರ ಸಂಖ್ಯೆ 106ಕ್ಕೇರಿದೆ.

ಇಬ್ಬರು ನಗರದ ತಳಂಗರೆಯ ಮಹಿಳೆಯರಾಗಿದ್ದು, 56 ಮತ್ತು  23ವಯಸ್ಸಿನವರಾಗಿದ್ದಾರೆ. ಇಬ್ಬರಿಗೆ ಸೋಂಕಿತರ ಸಂಪರ್ಕದಿಂದ ಸೋಂಕು  ಬಂದಿರುವುದಾಗಿ ಆರೋಗ್ಯ ಇಲಾಖೆ ತಿಳಿಸಿದೆ.

ಇಂದು ರಾಜ್ಯದಲ್ಲಿ ಏಳು ಪ್ರಕರಣಗಳು ಪತ್ತೆ

ತಿರುವನಂತಪುರ, ಕಾಸರಗೋಡು ತಲಾ  ಎರಡು,  ಕೊಲ್ಲಂ , ತ್ರಿಶೂರು , ಕಣ್ಣೂರು  ಜಿಲ್ಲೆಯಲ್ಲಿ ತಲಾ ಒಂದು ಪ್ರಕರಣಗಳು ದೃಢಪಟ್ಟಿವೆ. ಇದರಿಂದ ಕೇರಳದಲ್ಲಿ  ಸೋಂಕಿತರ ಸಂಖ್ಯೆ 215ಕ್ಕೆ ತಲಪಿದೆ. ಇಬ್ಬರು ಸೋಂಕಿತರು ಇದುವರೆಗೆ ಮೃತಪಟ್ಟಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ 7,733 ಮಂದಿ ನಿಗಾದಲ್ಲಿದ್ದಾರೆ. ಈ ಪೈಕಿ 163 ಮಂದಿ ಆಸ್ಪತ್ರೆಗಳಲ್ಲಿ ನಿಗಾದಲ್ಲಿದ್ದಾರೆ. 

ಮಂಗಳವಾರ 116 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ . ಇದುವರೆಗೆ  ಕಳುಹಿಸಿದ ಸ್ಯಾಂಪಲ್ ನಲ್ಲಿ 106 ಮಂದಿಯಲ್ಲಿ ಸೋಂಕು ದೃಢಪಟ್ಟರೆ, 476 ಮಂದಿಯ ತಪಾಸಣಾ ವರದಿ ನೆಗೆಟಿವ್ ಆಗಿದ್ದು, 467 ಮಂದಿಯ ಪರೀಕ್ಷಾ ವರದಿ ಲಭಿಸಬೇಕಿದೆ.

ಎ.1ರಿಂದ ಪಡಿತರ ಸಾಮಗ್ರಿ

ಉಚಿತ ಪಡಿತರ ಸಾಮಗ್ರಿ ಎಪ್ರಿಲ್ 1ರಿಂದ ವಿತರಿಸಲಾಗುವುದು.  ಬೆಳಗ್ಗೆ ಅಂತ್ಯೋದಯ , ಬಿಪಿಎಲ್ ಚೀಟಿದಾರರು, ಮಧ್ಯಾಹ್ನ ಬಳಿಕ ಐದು ಗಂಟೆ ತನಕ ಎಪಿಎಲ್ ಕಾರ್ಡ್  ದಾರರಿಗೆ  ಸಾಮಗ್ರಿ  ವಿತರಿಸಲಾಗುವುದು.

ಜಿಲ್ಲೆಗೆ ವಿಶೇಷ ಪ್ಯಾಕೇಜ್

ಅತೀ  ಹೆಚ್ಚು  ಸೋಂಕಿತರು ಪತ್ತೆಯಾಗಿರುವ ಕಾಸರಗೋಡು ಜಿಲ್ಲೆಗೆ ವಿಶೇಷ ಪ್ಯಾಕೇಜ್ ನ್ನು ರಾಜ್ಯ ಸರಕಾರ ಘೋಷಿಸಿದೆ.

ವೈದ್ಯಕೀಯ ಕಾಲೇಜು ಕೋವಿಡ್ ಆಸ್ಪತ್ರೆ

ಪೆರ್ಲ ಉಕ್ಕಿನಡ್ಕದಲ್ಲಿರುವ ವೈದ್ಯಕೀಯ ಕಾಲೇಜು ಆಸ್ಪತ್ರೆಯನ್ನು ಕೋವಿಡ್ ಕೇಂದ್ರವಾಗಿ ಘೋಷಿಸಲಾಗಿದೆ. ಕಾಸರಗೋಡಿನ ಕೇಂದ್ರ ವಿಶ್ವ ವಿದ್ಯಾನಿಲಯದ ಕೇಂದ್ರದಲ್ಲಿ ಸ್ಯಾಂಪಲ್ ತಪಾಸಣಾ ಕೇಂದ್ರಕ್ಕೆ ಅನುಮತಿ ಲಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News