ಕರ್ನಾಟಕ-ಕೇರಳ ಗಡಿ ಬಂದ್: ತೆರವುಗೊಳಿಸಲು ಡಿವೈಎಫ್‌ಐ ಆಗ್ರಹ

Update: 2020-03-31 14:11 GMT

ಉಳ್ಳಾಲ, ಮಾ. 31 : ಕರ್ನಾಟಕ ಮತ್ತು ಕೇರಳ ನಡುವೆ ಸಂಪರ್ಕ ಕಲ್ಪಿಸುವ ತಲಪಾಡಿ, ಪಾತೂರು, ನೆತ್ತಿಲಪದವು, ವರ್ಕಾಡಿ ಪ್ರದೇಶಗಳಲ್ಲಿ ಕರ್ನಾಟಕ ಸರಕಾರ ಗಡಿ ಬಂದ್ ಮಾಡಿ ಸಂಚಾರಕ್ಕೆ ತಡೆ ಒಡ್ಡುತ್ತಿರುವಂತಹ ಅಮಾನುಷ ಕೃತ್ಯ ಖಂಡನೀಯವಾಗಿದೆ. ಗಡಿನಾಡಿನ ಜನರ ಸಂಕಷ್ಟವನ್ನು ಮನಗಂಡು ಕೂಡಲೇ ತುರ್ತು ವಾಹನಗಳಿಗೆ ಉಭಯ ರಾಜ್ಯಗಳಿಗೆ ಪ್ರವೇಶಿಸಲು ಅನುಮತಿಯನ್ನು ನೀಡುವಂತೆ ಡಿವೈಎಫ್‌ಐ ಉಳ್ಳಾಲ ವಲಯ ಸಮಿತಿ ಒತ್ತಾಯಿಸಿದೆ.

ಈ ಗಡಿ ಸಂಪರ್ಕಗಳನ್ನು ಬಂದ್ ಮಾಡಿರುವ ಕ್ರಮದಿಂದ ಬಂಟ್ವಾಳ ತಾಲೂಕಿನ ಮಹಿಳೆ ಸಹಿತ ಇಬ್ಬರು ವೈದ್ಯಕೀಯ ಚಿಕಿತ್ಸೆ ಲಭಿಸದೆ ಮೃತಪಟ್ಟಿದ್ದಾರೆ. ಹಲವಾರು ಜನ ಡಯಾಲಿಸಿಸ್ ಮಾಡಿಸಬೇಕಾದ ರೋಗಿಗಳು ಆಸ್ಪತ್ರೆಗೆ ಬರಲಾಗದೇ ಸಂಕಷ್ಟ ಅನುಭವಿಸುತ್ತಿದ್ದಾರೆ. ಗಡಿ ಬಂದ್ ಮಾಡಿರುವುದನ್ನು ತೆರವುಗೊಳಿಸುವಂತೆ ಕೇಂದ್ರ ಸರಕಾರ ಸೂಚಿಸಿದ್ದರೂ ಇಲ್ಲಿನ ಜಿಲ್ಲಾಡಳಿತ ಅದಕ್ಕೆ ಸೊಪ್ಪು ಹಾಕದೆ ಗಡಿಯಲ್ಲಿ ಆ್ಯಂಬುಲೆನ್ಸ್ ಮತ್ತು ಇತರೆ ವಾಹನಗಳಿಗೆ ತಡೆ ಒಡ್ಡುತ್ತಿದೆ. ಇಂತಹ ಕೃತ್ಯಗಳು ದೇಶದ ಒಕ್ಕೂಟದ ವ್ಯವಸ್ಥಗೆ ಮಾರಕವಾಗಿದ್ದು ಈಗಾಗಲೇ ಲಾಕ್‌ಡೌನ್‌ನಿಂದ ಸಂಕಷ್ಟ ಅನುಭವಿಸುತ್ತಿರುವ ಜನರಿಗೆ ಇನ್ನಷ್ಟು ತೊಂದರೆ ಉಂಟು ಮಾಡುತ್ತಿದೆ. ದ.ಕ.ಜಿಲ್ಲಾಡಳಿತ ಮತ್ತು ಕೊರೋನ ದ.ಕ.ಜಿಲ್ಲಾ ವಿಶೇಷ ನೋಡಲ್ ಅಧಿಕಾರಿ ಪೊನ್ನುರಾಜ್ ಈ ಬಗ್ಗೆ ಕೂಡಲೇ ಗಮನಹರಿಸಿ ಉಭಯ ರಾಜ್ಯಗಳ ಗಡಿ ಸಂಪರ್ಕ ಬಂದ್ ಮಾಡಿರುವುದನ್ನು ತೆರವುಗೊಳಿಸುವಂತೆ ಡಿವೈಎಫ್ಐ ಉಳ್ಳಾಲ ವಲಯ ಸಮಿತಿಯ ಅಧ್ಯಕ್ಷ ಅಶ್ರಫ್ ಕೆಸಿರೋಡ್ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News