ಲಾಕ್‌ಡೌನ್: ಕುಡುಕರಿಗೆ ಮದ್ಯಕ್ಕಾಗಿ ವಿಶೇಷ ಪಾಸ್ ನೀಡಲು ಕೇರಳ ಸರಕಾರದ ಆದೇಶ

Update: 2020-03-31 16:47 GMT
ಸಾಂದರ್ಭಿಕ ಚಿತ್ರ

ತಿರುವನಂತಪುರ,ಮಾ.31: ಕೊರೋನ ವೈರಸ್ ಲಾಕ್‌ಡೌನ್ ನಿಂದಾಗಿ ಮದ್ಯ ದೊರೆಯದೆ ಹತಾಶರಾಗಿ ಖಿನ್ನತೆಯ ಲಕ್ಷಣಗಳನ್ನು ಹೊಂದಿರುವವರಿಗೆ ಮದ್ಯ ಲಭಿಸುವಂತಾಗಲು ವಿಶೇಷ ಪಾಸ್‌ಗಳನ್ನು ನೀಡಲು ಕೇರಳ ಸರಕಾರವು ನಿರ್ಧರಿಸಿದೆ.

ಬಲವಂತದ ಮದ್ಯ ವರ್ಜನೆಯ ಲಕ್ಷಣಗಳೊಂದಿಗೆ ವೈದ್ಯರ ಶಿಫಾರಸು ಚೀಟಿಯನ್ನು ಹೊಂದಿರುವವರು ಅಬಕಾರಿ ಇಲಾಖೆಯಿಂದ ಮದ್ಯವನ್ನು ಖರೀದಿಸಬಹುದಾಗಿದೆ. ಈ ಬಗ್ಗೆ ವೈದ್ಯರ ಸಂಘದ ಆಕ್ಷೇಪದ ಹೊರತಾಗಿಯೂ ಸೋಮವಾರ ರಾತ್ರಿ ಸರಕಾರಿ ಆದೇಶವನ್ನು ಹೊರಡಿಸಲಾಗಿದೆ.

ರಾಜ್ಯದಲ್ಲಿ ಲಾಕ್‌ಡೌನ್ ಮತ್ತು ಮದ್ಯದಂಗಡಿಗಳನ್ನು ಮುಚ್ಚಲಾಗಿರುವ ಹಿನ್ನೆಲೆಯಲ್ಲಿ ಪ್ರತಿದಿನ ಮದ್ಯ ಸೇವಿಸುವವರು ಹತಾಶೆಗೊಳಗಾಗಿರುವ ಮತ್ತು ಆತ್ಮಹತ್ಯೆಯ ಮನಃಸ್ಥಿತಿಗೆ ತಳ್ಳಲ್ಪಟ್ಟಿರುವುದು ಸೇರಿದಂತೆ ಸಾಮಾಜಿಕ ಸಮಸ್ಯೆಗಳ ಹಲವಾರು ಘಟನೆಗಳು ವರದಿಯಾಗಿವೆ. ಅವರಿಗೆ ಸೀಮಿತ ಪ್ರಮಾಣದಲ್ಲಿ ಮದ್ಯವನ್ನು ಒದಗಿಸಲು ಸರಕಾರವು ಕ್ರಮಗಳನ್ನು ಕೈಗೊಂಡಿದೆ. ಮದ್ಯ ಹಿಂದೆಗೆತದ ಲಕ್ಷಣಗಳನ್ನು ಹೊಂದಿರುವವರು ಸರಕಾರಿ ವೈದ್ಯರಿಂದ ತಪಾಸಣೆಗೊಳಗಾಗಿ ಅವರಿಂದ ಶಿಫಾರಸು ಚೀಟಿಯನ್ನು ಪಡೆದುಕೊಂಡು ಸರಕಾರವು ವಿತರಿಸಿರುವ ಗುರುತಿನ ಚೀಟಿಯೊಂದಿಗೆ ಸಮೀಪದ ಅಬಕಾರಿ ಕಚೇರಿಯಲ್ಲಿ ಸಲ್ಲಿಸಿದರೆ ಅವರಿಗೆ ವಿಶೇಷ ಪಾಸ್ ನೀಡಲಾಗುವುದು.

ಇದನ್ನು ಪಾನೀಯಗಳ ನಿಗಮದಲ್ಲಿ ಹಾಜರುಪಡಿಸಿ ಸೀಮಿತ ಪ್ರಮಾಣದಲ್ಲಿ ಮದ್ಯವನ್ನು ಖರೀದಿಸಬಹುದು. ಇದಕ್ಕಾಗಿ ಮದ್ಯದಂಗಡಿಗಳನ್ನು ತೆರೆದಿಡುವ ಅಗತ್ಯವಿಲ್ಲ ಎಂದು ಆದೇಶದಲ್ಲಿ ತಿಳಿಸಿಲಾಗಿದೆ.

ಆದರೆ,ಮದ್ಯದ ಚಟವನ್ನು ಹೊಂದಿರುವವರಿಗೆ ಶಿಫಾರಸು ಚೀಟಿಯ ಆಧಾರದಲ್ಲಿ ಮದ್ಯ ಪೂರೈಸುವ ಯೋಜನೆಗಾಗಿ ಸರಕಾರವನ್ನು ಟೀಕಿಸಿರುವ ಭಾರತೀಯ ವೈದ್ಯಕೀಯ ಸಂಘವು,ಇದು ಅವೈಜ್ಞಾನಿಕವಾಗಿದೆ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News