ಕೂಲಿ ಕಾರ್ಮಿಕರನ್ನು ಬಾಡಿಗೆ ಮನೆಯಿಂದ ಹೊರಹಾಕಿದರೆ ಕ್ರಿಮಿನಲ್ ಮೊಕದ್ದಮೆ: ಉಡುಪಿ ಡಿಸಿ

Update: 2020-03-31 16:56 GMT

ಉಡುಪಿ, ಮಾ.31: ಕೊರೋನ ಸೋಂಕು ಹರಡುವುದನ್ನು ತಡೆಯಲು ಜಿಲ್ಲಾಡಳಿತ ಜಿಲ್ಲೆಯ ಸಾರ್ವಜನಿಕರು ಹಾಗೂ ಜಿಲ್ಲೆಯ ವಿವಿಧೆಡೆಗಳಲ್ಲಿರುವ ವಲಸೆ ಕೂಲಿ ಕಾರ್ಮಿಕರು ಪ್ರಯಾಣ ಬೆಳಸದಂತೆ ನಿರ್ಬಂಧಿಸಿದೆ. ಪ್ರಸ್ತುತ ಈ ಕೂಲಿಕಾರ್ಮಿಕರು ಜಿಲ್ಲೆಯಲ್ಲಿ ಬಾಡಿಗೆ ಮನೆ/ಶೆಡ್‌ಗಳಲ್ಲಿ ವಾಸವಿದ್ದು, ಇವರನ್ನು ಅಲ್ಲಿಂದ ಹೊರಹಾಕುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ.  ಯಾವುದೇ ಕಾರಣಕ್ಕೂ ಇವರನ್ನು ಬಾಡಿಗೆ ಶೆಡ್/ ಮನೆಗಳ ಮಾಲಕರು ಅಲ್ಲಿಂದ ಹೊರಹಾಕುವಂತಿಲ್ಲ. ಹಾಗೂ ಮನೆ/ಶೆಡ್ ಖಾಲಿ ಮಾಡುವಂತೆ ಒತ್ತಾಯಿಸುವಂತಿಲ್ಲ. ಈ ಬಗ್ಗೆ ದೂರು ಬಂದಲ್ಲಿ ಸಂಬಂಧಪಟ್ಟವರ ವಿರುದ್ದ ಕಠಿಣ ಕ್ರಮ ಜರಗಿಸಲಾಗುವುದು. ಅಲ್ಲದೇ ಜಿಲ್ಲೆಯಲ್ಲಿ ಕಾರ್ಮಿಕರ ಶೆಡ್ /ಬಾಡಿಗೆ ಮನೆಗಳಲ್ಲಿ ವಾಸವಿರುವ ಬಾಡಿಗೆದಾರರಿಂದ ಮಾರ್ಚ್ ಮತ್ತು ಎಪ್ರಿಲ್ ತಿಂಗಳ ಬಾಡಿಗೆಯನ್ನು ವಸೂಲಿ ಮಾಡದಂತೆ ಎಚ್ಚರಿಸಿದ್ದಾರೆ. ಒಂದು ವೇಳೆ ವಸೂಲಿ ಮಾಡಿದಲ್ಲಿ ಸಂಬಂದಪಟ್ಟ ಮನೆ ಮಾಲಕರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಜಿಲ್ಲೆಯ ಕಾರ್ಖಾನೆಗಳಲ್ಲಿ ಹಾಗೂ ಕಟ್ಟಡ ನಿರ್ಮಾಣಗಳಲ್ಲಿ ಕೆಲಸ ನಿರ್ವಹಿ ಸುತ್ತಿರುವ ಕೂಲಿ ಕಾರ್ಮಿಕರಿಗೆ ನಿರ್ಬಂಧದ ಅವಧಿಯಲ್ಲಿ ಊಟೋಪಚಾರ ಗಳಿಗೆ ತೊಂದರೆ ಆಗುತ್ತಿರುವುದು ಜಿಲ್ಲಾಡಳಿತದ ಗಮನಕ್ಕ ಬಂದಿದ್ದು, ಅಂತಹ ಕೂಲಿ ಕಾರ್ಮಿಕರಿಗೆ ದಿನನಿತ್ಯಕ್ಕೆ ಅಗತ್ಯವಿರುವ ಊಟೋಪಚಾರ ಅಥವಾ ಅದಕ್ಕೆ ಅಗತ್ಯವಿರುವ ಆಹಾರ ಸಾಮಗ್ರಿಗಳನ್ನು, ಕೂಲಿ ಕಾರ್ಮಿಕರು ಕೆಲಸ ನಿರ್ವಹಿಸುವ ಕಾರ್ಖಾನೆ ಮತ್ತು ಕಟ್ಟಡ ನಿರ್ಮಾಣ ಮಾಡುತ್ತಿರುವ ಮಾಲಕರು ಒದಗಿಸುವಂತೆಯೂ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿರುವ ಜಿಲ್ಲಾಧಿಕಾರಿಗಳು, ಈ ಕುರಿತು ದೂರು ಸ್ವೀಕೃತವಾದಲ್ಲಿ ಸಂಬಂದಪಟ್ಟ ಮಾಲಕರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಹೇಳಿದ್ದಾರೆ.

 ದೂರುಗಳನ್ನು ನೀಡುವವರು ತಮ್ಮ ದೂರುಗಳನ್ನು, ರಾಜ್ ಜಿ ನಾಯ್ಕ, ಹಿರಿಯ ಭೂವಿಜ್ಞಾನಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ (ಮೊಬೈಲ್ ಸಂ.: 9480092738), ಬಾಲಕೃಷ್ಣ, ಜಿಲ್ಲಾ ಕಾರ್ಮಿಕ ಅಧಿಕಾರಿ(ಮೊಬೈಲ್: 9448334324), ಪ್ರವೀಣ್ ಕುಮಾರ್, ಕಾರ್ಮಿಕ ನಿರೀಕ್ಷಕರು (ಮೊಬೈಲ್: 8792638806) ಇವರಿಗೆ ಸಲ್ಲಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News