ದ.ಕ.ಜಿಲ್ಲಾದ್ಯಂತ ಔಷಧ ಪೂರೈಕೆಯಲ್ಲಿ ವ್ಯತ್ಯಯ

Update: 2020-03-31 17:03 GMT
ಸಾಂದರ್ಭಿಕ ಚಿತ್ರ

ಮಂಗಳೂರು, ಮಾ.31:ಲಾಕ್‌ಡೌನ್ ಮಧ್ಯೆಯೂ ಮೆಡಿಕಲ್ ಅಂಗಡಿಗಳ ತೆರೆಯಲು ಅವಕಾಶವಿದೆಯಾದರೂ ಕೂಡ ಬಹುತೇಕ ಮೆಡಿಕಲ್ ಅಂಗಡಿಗಳಲ್ಲಿ ಔಷಧ ಪೂರೈಕೆಯಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ. ಇದರಿಂದ ಮೆಡಿಕಲ್ ಅಂಗಡಿಗಳಲ್ಲಿ ಔಷಧಗಳ ಕೊರತೆ ಕಂಡುಬಂದಿದ್ದು, ಕೆಲವು ಕಡೆ ಔಷಧಗಳ ಅಲಭ್ಯತೆಯಿಂದಾಗಿ ಮೆಡಿಕಲ್ ಅಂಗಡಿಗಳು ತೆರೆಯಲಾರದಂತಹ ಸ್ಥಿತಿ ಉಂಟಾಗಿದೆ.

ಜನತಾ ಕರ್ಫ್ಯೂ, ಲಾಕ್‌ಡೌನ್ ಮಧ್ಯೆ ಔಷಧ ಪೂರೈಕೆ ಮಾಡುವ ಏಜೆನ್ಸಿಗಳಲ್ಲಿ ಕೆಲಸಗಾರರ ಕೊರತೆ ಉಂಟಾಗಿದ್ದು, ಇದರಿಂದ ಸಮರ್ಪಕ ರೀತಿಯಲ್ಲಿ ಔಷಧ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿವೆ.

ನಗರದ ಹೆಚ್ಚಿನ ಮೆಡಿಕಲ್ ಅಂಗಡಿಗಳ ಮುಂದೆ ಪ್ರತಿದಿನ ಸರತಿ ಸಾಲು ಕಂಡು ಬರುತ್ತಿದೆ. ಜನರು ಅಗತ್ಯಕ್ಕಿಂತ ಹೆಚ್ಚು ಔಷಧ ಕೊಂಡೊಯ್ಯು ತ್ತಿದ್ದಾರೆ ಎನ್ನಲಾಗಿದೆ. ಮೆಡಿಕಲ್ ಅಂಗಡಿಗಳು ಪ್ರತೀ ದಿನವೂ ತೆರೆದಿರುತ್ತದೆಯಾದರೂ ಕೂಡ ಜನರು ಮುಗಿಬಿದ್ದು ಅಗತ್ಯಕ್ಕಿಂತ ಹೆಚ್ಚು ಔಷಧ ಖರೀದಿಗೆ ಮುಂದಾಗುತ್ತಿದ್ದಾರೆ. ಇದರಿಂದ ಔಷಧ ಕೊರತೆ ಉಂಟಾಗುತ್ತಿದೆ ಎಂದು ಮೆಡಿಕಲ್ ಶಾಪ್ ಸಿಬ್ಬಂದಿಯೊಬ್ಬರು ಅಭಿಪ್ರಾಯಪಡುತ್ತಾರೆ.

ನಗರ ಪ್ರದೇಶದ ಮೆಡಿಕಲ್ ಅಂಗಡಿಗಳಲ್ಲಿ ಔಷಧ ಕೊರತೆ ಉಂಟಾಗಿದ್ದರೆ, ಇನ್ನು ಗ್ರಾಮೀಣ ಭಾಗದ ಬಹುತೇಕ ಔಷಧ ಅಂಗಡಿಗಳಲ್ಲಿ ಶೇ.80ರಷ್ಟು ಔಷಧಗಳು ಖಾಲಿಯಾಗಿವೆ. ಗ್ರಾಮಾಂತರ ಪ್ರದೇಶಕ್ಕೆ ಕಳೆದೊಂದು ವಾರದಿಂದ ಔಷಧ ಪೂರೈಕೆಯಾಗುತ್ತಿಲ್ಲ ಎಂಬ ದೂರುಗಳು ಬಂದಿವೆ. ಇದರಿಂದ ಸಾಮಾನ್ಯ ಜ್ವರ, ನೆಗಡಿ, ಮೈಕೈ ನೋವಿಗೂ ಔಷಧವಿಲ್ಲದೆ ಜನರು ಪರದಾಡುವಂತಾಗಿದೆ.

ಕ್ಲಿನಿಕ್, ಆಸ್ಪತ್ರೆಯ ಹೊರರೋಗಿ ವಿಭಾಗವೂ ಬಂದ್: ಅಗತ್ಯ ಸೇವೆಗಳಲ್ಲಿ ಒಂದಾಗಿರುವ ವೈದ್ಯಕೀಯ ಸೇವೆಗಳು ಯಾವುದೇ ಸಮಸ್ಯೆ ಇಲ್ಲದೆ ಜನಸಾಮಾನ್ಯರಿಗೆ ಲಭ್ಯವಾಗಬೇಕು ಎಂಬುದು ಸರಕಾರದ ನಿಲುವಾದರೂ ಕೂಡ ಬಹುತೇಕ ಎಲ್ಲ ಖಾಸಗಿ ಕ್ಲಿನಿಕ್‌ಗಳು ಬಾಗಿಲು ಹಾಕಿ ಕೊಂಡಿವೆ. ಇನ್ನು ಬಹುತೇಕ ಎಲ್ಲ ಆಸ್ಪತ್ರೆಗಳ ಹೊರರೋಗಿಗಳ ವಿಭಾಗಗಳು ಸೇವೆಯನ್ನು ನಿಲ್ಲಿಸಿವೆ. ಇದರಿಂದ ವೈದ್ಯಕೀಯ ಸೇವೆ ಕೂಡ ಜನಸಾಮಾನ್ಯರಿಗೆ ಅಲಭ್ಯವಾಗುತ್ತಿವೆ.

ಕೇರಳ- ಮಹಾರಾಷ್ಟ್ರ ಗಡಿಭಾಗ ಬಂದ್ ಆಗಿರುವುದರಿಂದ ಬಹುತೇಕ ಸರಕು ಸಾಗಾಟಕ್ಕೆ ತಡೆಯಾಗಿದೆ. ಹಾಗಾಗಿ ಕೆಲವು ಕಂಪೆನಿಯ ಔಷಧಗಳ ಪೂರೈಕೆಯಲ್ಲಿ ಮಾತ್ರ ತಾತ್ಕಾಲಿಕ ಸಮಸ್ಯೆ ಆಗಿದೆ. ಸದ್ಯ ಯಾವುದೇ ಔಷಧ ಅಂಗಡಿಗಳಲ್ಲಿ ಮೆಡಿಸಿನ್ ಕೊರತೆ ಆಗದಂತೆ ಕ್ರಮ ವಹಿಸಲಾಗುತ್ತಿದೆ. ಕೆಲವರು ನಿರ್ದಿಷ್ಟ ಕಂಪೆನಿಯ ಔಷಧ ಬೇಕು ಎಂದು ಕೇಳಿಕೊಂಡು ಬರುತ್ತಿರುವುದು ಗಮನಕ್ಕೆ ಬಂದಿದೆ. ಅದೇ ಬೇಕು ಎಂದು ಕೇಳುವವರಿಗೆ ಸಿಗದೇ ಇರಬಹುದು.

-ಶಂಕರ್ ನಾಯಕ್, ಸಹಾಯಕ ಔಷಧ ನಿಯಂತ್ರಣಾಧಿಕಾರಿ
ಮಂಗಳೂರು ವಿಭಾಗ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News