ಜೋಕಟ್ಟೆ: ಎಂಆರ್‌ಪಿಎಲ್ ಘಟಕದಿಂದ ಕಾಣಿಸಿಕೊಂಡ ದಟ್ಟ ಹೊಗೆ

Update: 2020-03-31 17:07 GMT

ಮಂಗಳೂರು, ಮಾ.31: ಕೊರೋನ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್‌ಡೌನ್ ವಿಧಿಸಿದ್ದರಿಂದ ಮನೆಗಳಲ್ಲೇ ಉಳಿದಿರುವ ಜೋಕಟ್ಟೆ ಗ್ರಾಮಸ್ಥರು ಸೋಮವಾರ ರಾತ್ರಿ ಏಕಾಏಕಿ ಮನೆ ಸಮೀಪದಲ್ಲೇ ಇರುವ ಎಂಆರ್‌ಪಿಎಲ್ ಮೂರನೇ ಹಂತದ ಘಟಕದ ಚಿಮಣಿಗಳು ದೈತ್ಯಾಕಾರದ ದಟ್ಟ ಹೊಗೆ ಉಗುಳುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ.

ರಾತ್ರಿ ಸುಮಾರು ಎಂಟು ಗಂಟೆಗೆ ದುರ್ಗಂಧ ಊರಿಡೀ ಹಬ್ಬಿದ್ದು, ಜೊತೆಗೆ ಚಿಮಿಣಿಗಳು ಭಯ ಹುಟ್ಟಿಸುವ ರೀತಿಯಲ್ಲಿ ಆಕಾಶದೆತ್ತರದ ಹೊಗೆ ಉಗಳತೊಡಗಿತು ಎಂದು ಗ್ರಾಮಸ್ಥರು ಆಪಾದಿಸಿದ್ದಾರೆ.

ದುರ್ಗಂಧ ದಿನನಿತ್ಯದ ಸಮಸ್ಯೆಯಾಗಿದ್ದರೂ ಕೂಡ ಸೋಮವಾರ ರಾತ್ರಿಯ ದಟ್ಟ ಹೊಗೆ ಮತ್ತು ದುರ್ನಾತವು ಉಸಿರಾಟಕ್ಕೂ ಕಷ್ಟ ಪಡುವಂತಾಗಿತ್ತು. ಇದರಿಂದ ಜನರು ಮನೆಯಿಂದ ಹೊರಬಂದು ಗುಂಪು ಸೇರತೊಡಗಿದರು. ಗ್ರಾಮದ ಮುಖಂಡರು ಎಂಆರ್‌ಪಿಎಲ್ ಅಧಿಕಾರಿಗಳನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದಾರೆ. ಕಂಪೆನಿಯ ಅಧಿಕಾರಿಗಳು ಶಟ್‌ಡೌನ್ ಮಾಡುತ್ತಿರುವುದರಿಂದ ಹೀಗಾಗಿದೆ. ಶೀಘ್ರ ಸರಿಪಡಿಸಲಾಗುವುದು ಎಂದು ಹಾರಿಕೆಯ ಉತ್ತರ ನೀಡಿದ್ದಾರೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಎಂಆರ್‌ಪಿಎಲ್ ನಮಗೆ ನೀಡುವ ತೊಂದರೆಗಳು ಒಂದೆರಡಲ್ಲ. ಶಬ್ದ, ವಾಯು ಮಾಲಿನ್ಯ ದಿನ ನಿತ್ಯದ ಸಮಸ್ಯೆಯಾಗಿದೆ. ದೈತ್ಯಾಕಾರದ ಹೊಗೆಯ ಬಳಿಕ ನಾವು ರಾತ್ರಿ ನಿದ್ದೆ ಮಾಡಿಲ್ಲ. ದುರ್ಗಂಧದಿಂದ ಉಸಿರಾಡುವುದೂ ಕಷ್ಟವಾಗುತ್ತಿತ್ತು.

- ಸಿಲ್ವಿಯಾ, ಜೋಕಟ್ಟೆ

ನಾವು ಐದು ವರ್ಷದಿಂದ ಸತತವಾಗಿ ಕಂಪೆನಿಯ ಮಾಲಿನ್ಯದ ವಿರುದ್ಧ ಹೋರಾಟ ನಡೆಸುತ್ತಾ ಬಂದಿದ್ದೇವೆ. ಈ ಭಾಗದ ಮಾಲಿನ್ಯದ ಸಮಸ್ಯೆ ಬಗೆಹರಿಸಲು ಸರಕಾರ ನಿಗದಿಪಡಿಸಿದ ಆರು ಅಂಶಗಳ ಆದೇಶವೂ ಪಾಲನೆಯಾಗುತ್ತಿಲ್ಲ. ಕಂಪೆನಿಯಂತೂ ಹೀಗಾದಾಗ ಹಾರಿಕೆ ಉತ್ತರ ನೀಡಿ ಜಾರಿಕೊಳ್ಳುತ್ತದೆ. ಜಿಲ್ಲಾಡಳಿತದ ಸಹಿತ ಶಾಸಕರು ನಮ್ಮ ದೂರುಗಳನ್ನು ಸದಾ ಕಡೆಗಣಿಸುತ್ತಾ ಬಂದಿದ್ದಾರೆ.
- ಅಬೂಬಕರ್ ಬಾವಾ,
ಗ್ರಾಪಂ ಸದಸ್ಯ ಜೋಕಟ್ಟೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News