ಆಡಳಿತಾತ್ಮಕ ವೈಫಲ್ಯ ಮುಚ್ಚಿ ಹಾಕಲು ತಬ್ಲೀಗ್ ಜಮಾಅತನ್ನು ಬಲಿಪಶು ಮಾಡಲಾಗುತ್ತಿದೆ: ಪಾಪ್ಯುಲರ್ ಫ್ರಂಟ್

Update: 2020-03-31 18:00 GMT

ಮಂಗಳೂರು : ಮರ್ಕಝ್ ನಿಝಾಮುದ್ದೀನ್ ವಿರುದ್ಧದ ಆರೋಪಗಳು ನಿರಾಧಾರವಾದುದು ಮತ್ತು ಪೂರ್ವ ಸಿದ್ಧತೆ ಇಲ್ಲದ ಲಾಕ್‍ಡೌನ್‍ ನಿಂದಾದ ಸಾಮೂಹಿಕ ವೈಫಲ್ಯವನ್ನು ಮುಚ್ಚಿಹಾಕಿ, ಜನರ ಗಮನವನ್ನು ಬೇರೆಡೆಗೆ ಸೆಳೆಯಲು ದಿಲ್ಲಿ ಸರಕಾರ ಮತ್ತು ಕೆಲವೊಂದು ಮಾಧ್ಯಮಗಳು ತಬ್ಲೀಗ್ ಜಮಾಅತನ್ನು ಬಲಿಪಶು ಮಾಡುತ್ತಿವೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಚೆಯರ್‍ಮೆನ್ ಒ.ಎಂ.ಎ.ಸಲಾಂ ಹೇಳಿದ್ದಾರೆ.

ಲಾಕ್‍ಡೌನ್‍ನಿಂದ ಉದ್ದೇಶಿಸಲಾಗಿದ್ದ ಸಾಮಾಜಿಕ ಅಂತರವು ಶೋಚನೀಯವಾಗಿ ವೈಫಲ್ಯ ಕಂಡಿದೆ. ಯಾಕೆಂದರೆ ಇದನ್ನು ಯಾವುದೇ ಪೂರ್ವ ತಯಾರಿ ಇಲ್ಲದೆ ಕಾರ್ಯಗತಗೊಳಿಸಲಾಗಿತ್ತು ಮಾತ್ರವಲ್ಲ ಇದು ದುರಂತಗಳಿಗೆ ಕಾರಣವಾಯಿತು. ಲಾಕ್‍ಡೌನ್ ಪ್ರಾರಂಭವಾಗುವು ದಕ್ಕೂ ಮೊದಲೇ, ಮರ್ಕಝ್ ನಿಝಾಮುದ್ದೀನ್ ತನ್ನೆಲ್ಲಾ ಪೂರ್ವ ನಿಗದಿತ ಕಾರ್ಯಕ್ರಮಗಳನ್ನು ರದ್ದುಪಡಿಸಿತ್ತು ಮತ್ತು ಆಡಳಿತದ ಸೂಚನೆ ಗಳನ್ನು ಸಂಪೂರ್ಣವಾಗಿ ಅನುಸರಿಸಿತ್ತು. ಆದಾಗ್ಯೂ, ಎಚ್ಚರಿಕೆ ಮತ್ತು ಸೂಕ್ತ ಕ್ರಮಗಳನ್ನು ವಹಿಸದೇ ಹೇರಲಾದ ಲಾಕ್‍ಡೌನ್, ತದನಂತರ ಲಕ್ಷಾಂತರ ಜನರಿಗೆ ದುರಂತವಾಗಿ ಮಾರ್ಪಟ್ಟಿತು.

ದೇಶಾದ್ಯಂತ ಕುಟುಂಬಗಳು ಮತ್ತು ಕಾರ್ಮಿಕ ವರ್ಗಗಳು ವಿಶೇಷವಾಗಿ ದೇಶದ ಪ್ರಮುಖ ನಗರಗಳಲ್ಲಿ ಸಂಕಷ್ಟಕ್ಕೆ ಸಿಲುಕಿವೆ. ದಿಲ್ಲಿಯು ಲಾಕ್‍ಡೌನ್‍ನಿಂದ ಅತಿಹೆಚ್ಚು ಪರಿಣಾಮಕ್ಕೊಳಗಾಗಿರುವ ನಗರವಾಗಿದ್ದು, ಇದಕ್ಕೆ ಕೇಂದ್ರ ಸರಕಾರ ಮತ್ತು ದಿಲ್ಲಿ ರಾಜ್ಯ ಸರಕಾರಗಳು ಸಮಾನ ಹೊಣೆಯಾಗಿವೆ. ತಬ್ಲೀಗ್ ಮರ್ಕಝ್ ಕೇಂದ್ರದಲ್ಲಿ  ಜಮಾವಣೆಯಾಗಿದ್ದ ಸಾವಿರಾರು ಭಕ್ತರು ಅನಿರೀಕ್ಷಿತ ನಿರ್ಬಂಧದಿಂದ ಬಿಕ್ಕಟ್ಟನ್ನು ಎದುರಿಸಿದರು ಮತ್ತು ಜನರನ್ನು ತಮ್ಮ ಮನೆಗಳಿಗೆ ಕಳುಹಿಸಿಕೊಡಲು ಅನುಮತಿಸುವಂತೆ ಅಧಿಕಾರಿಗಳಿಗೆ ಅವರು ಸಲ್ಲಿಸಿದ ಮನವಿಯನ್ನೂ ಉಪೇಕ್ಷಿಸಲಾಯಿತು. ಹೀಗೆ ಕರ್ಫ್ಯೂ ಹೇರಿದ ಬಳಿಕ ಎಲ್ಲಾ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಲಾಯಿತಾದರೂ, ಸರಕಾರಿ ಏಜೆನ್ಸಿಗಳಿಂದ ಸಾಗಾಟ ಅಥವಾ ವಸತಿಯ ಯಾವುದೇ ವ್ಯವಸ್ಥೆ ಕಲ್ಪಿಸದ ಕಾರಣ ಪ್ರತಿನಿಧಿಗಳನ್ನು ಮಸ್ಜಿದ್‍ನ ಒಳಗೆ ಉಳಿಸಿಕೊಳ್ಳದ ಹೊರತು ಬೇರೆ ಯಾವುದೇ ಹಾದಿ ಮರ್ಕಝ್ ಬಳಿ ಇರಲಿಲ್ಲ. ಆದ್ದರಿಂದ ಮರ್ಕಝನ್ನು ದೂಷಿಸುತ್ತಿರುವುದು ಮಾಧ್ಯಮಗಳ ಉದ್ದೇಶಪೂರ್ವಕ ಅಪಪ್ರಚಾರವಾಗಿದೆ ಮತ್ತು ಪರಿಸ್ಥಿತಿಗೆ ಮರ್ಕಝ್ ಮತ್ತು ಅದರ ಮುಖ್ಯಸ್ಥ ಮೌಲಾನಾ ಸಾದ್‍ರನ್ನು ಹೊಣೆಯಾಗಿಸುತ್ತಿರುವುದು ಖಂಡನಾರ್ಹವಾದುದು. ಮರ್ಕಝ್ ವಿರುದ್ಧ ಪ್ರಕರಣ ದಾಖಲಿಸಿರುವುದು ಅನ್ಯಾಯದ ಕ್ರಮ ಮತ್ತು ಅದನ್ನು ಕೈಬಿಡುವ ಅಗತ್ಯವಿದೆ ಎಂದು ಹೇಳಿದರು.

ಆಡಳಿತವು ಸೃಷ್ಟಿಸಿದ ಮರ್ಕಝ್ ಮತ್ತು ತಬ್ಲೀಗ್ ಜಮಾಅತನ್ನು ತೇಜೋವಧೆಗೊಳಿಸುವ ಪ್ರಕ್ರಿಯೆಯಿಂದ ಮಾಧ್ಯಮಗಳು  ದೂರವಿರಬೇಕೆಂದು ಪಾಪ್ಯುಲರ್ ಫ್ರಂಟ್ ಕೇಳಿಕೊಂಡಿದೆ. ದೇಶಾದ್ಯಂತ ಸಂಕಷ್ಟಕ್ಕೊಳಗಾಗಿರುವ ಎಲ್ಲಾ ಜನರಿಗೆ ಆಹಾರ, ವಸತಿ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಖಾತರಿಪಡಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದೂ ಪಾಪ್ಯುಲರ್ ಫ್ರಂಟ್ ಕೇಂದ್ರ ಮತ್ತು ರಾಜ್ಯ ಸರಕಾರವನ್ನು ಆಗ್ರಹಿಸುವುದಾಗಿ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News