ಉಡುಪಿ: ಶಂಕಿತ ಕೊರೆನ ಪರೀಕ್ಷೆಗೆ ಐವರು ಆಸ್ಪತ್ರೆಗೆ

Update: 2020-03-31 18:02 GMT

ಉಡುಪಿ: ಶಂಕಿತ ಕೊರೋನ ಪರೀಕ್ಷೆಗೆ ಐವರು ಆಸ್ಪತ್ರೆಗೆ ಉಡುಪಿ, ಮಾ.30: ಜಿಲ್ಲೆಯಲ್ಲಿ ಮಂಗಳವಾರ ಒಟ್ಟು ಐವರು ಶಂಕಿತ ಕೊರೋನ ವೈರಸ್ ಸೋಂಕಿನ ಪರೀಕ್ಷೆಗಾಗಿ ಉಡುಪಿಯ ವಿವಿಧ ಆಸ್ಪತ್ರೆಗಳ ಐಸೋಲೇಷನ್ ವಾರ್ಡ್‌ಗೆ ದಾಖಲಾಗಿದ್ದಾರೆ. ಇವರಲ್ಲಿ ನಾಲ್ವರು ಪುರುಷರು ಹಾಗೂ ಓರ್ವ ಮಹಿಳೆಯಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಐವರಲ್ಲಿ ಮೂವರು ಉಸಿರಾಟದ ತೊಂದರೆಗಾಗಿ ಆಸ್ಪತ್ರೆಗೆ ಸೇರಿದ್ದು, ಉಳಿದಿಬ್ಬರು ಪ್ರವಾಸ ಮಾಡಿದ ಇತಿಹಾಸವನ್ನು ಹೊಂದಿದ್ದಾರೆ. ಇವರೆಲ್ಲರ ಗಂಟಲು ದ್ರವವನ್ನು ಪರೀಕ್ಷೆಗಾಗಿ ಶಿವಮೊಗ್ಗ ಪ್ರಯೋಗಾಲಯಕ್ಕೆ ಕಳುಹಿಸ ಲಾಗಿದೆ. ಇವರೊಂದಿಗೆ ಈ ಮೊದಲೇ ಆಸ್ಪತ್ರೆಗಳಿಗೆ ದಾಖಲಾದ ಉಸಿರಾಟದ ತೊಂದರೆ ಎದುರಿಸುತಿದ್ದ ಇನ್ನೂ 15 ಮಂದಿಯ ಸ್ಯಾಂಪಲ್‌ನ್ನು ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದೂ ಅವರು ವಿವರಿಸಿದರು.

ಈ ಮೂಲಕ ಇದುವರೆಗೆ ಒಟ್ಟು 160 ಮಂದಿಯ ಸ್ಯಾಂಪಲ್‌ಗಳನ್ನು ಶಂಕಿತ ಕೊರೋನ ಸೋಂಕಿಗಾಗಿ ಪ್ರಯೋಗಾಲಯಗಳಿಗೆ ಕಳುಹಿಸ ಲಾಗಿದ್ದು, ಇವರಲ್ಲಿ ನಿನ್ನೆಯವರೆಗೆ ಕಳುಹಿಸಿದ ಎಲ್ಲಾ 140 ಮಂದಿಯ ಫಲಿತಾಂಶ ಬಂದಿದೆ. 137 ಮಂದಿಯ ವರದಿ ಸೋಂಕಿಗೆ ನೆಗೆಟೀವ್ ಆಗಿದ್ದು, ಮೂವರದ್ದು ಮಾತ್ರ ಪಾಸಿಟಿವ್ ಆಗಿ ಬಂದಿದೆ. ಹೀಗಾಗಿ ಇಂದು ಕಳುಹಿಸಿದ 20 ಮಾದರಿಗಳ ಫಲಿತಾಂಶ ಮಾತ್ರ ಬರಲು ಬಾಕಿ ಇದೆ ಎಂದೂ ಡಾ.ಸೂಡ ತಿಳಿಸಿದರು.

ಜಿಲ್ಲೆಯಲ್ಲಿ ಇಂದುವರೆಗೆ ಒಟ್ಟು 2,546 ಮಂದಿಯನ್ನು ತಪಾಸಣೆಗೊಳ ಪಡಿಸಿದ್ದು, ಇವರಲ್ಲಿ ಮಂಗಳವಾರ ತಪಾಸಣೆಗೊಳಗಾದ 237 ಮಂದಿ ಸೇರಿದ್ದಾರೆ. ಮಂಗಳವಾರ ಇನ್ನೂ 232 ಮಂದಿ ಮನೆ ನಿಗಾಕ್ಕೆ ನೋಂದಣಿ ಗೊಂಡಿದ್ದಾರೆ. ಈವರೆಗೆ 1304 ಮಂದಿ 14 ದಿನಗಳ ಮನೆ ನಿಗಾ ಪೂರೈಸಿದ್ದರೆ, 168 ಮಂದಿ 28 ದಿನಗಳ ಮನೆ ನಿಗಾ ಪೂರೈಸಿದ್ದಾರೆ. ಇಂದು 21 ಮಂದಿ ಆಸ್ಪತ್ರೆಯ ಕ್ವಾರಂಟೇನ್‌ಗೆ ದಾಖಲಾಗಿದ್ದಾರೆ ಎಂದವರು ವಿವರಿಸಿದರು.

ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 1056 ಮಂದಿ ಮನೆ ಹಾಗೂ ಆಸ್ಪತ್ರೆಗಳಲ್ಲಿ ನಿಗಾದಲ್ಲಿ ಇದ್ದಾರೆ ಎಂದು ಡಾ.ಸೂಡ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News