ಕೊರೋನವೈರಸ್: ರೈಲ್ವೇ ಬೋಗಿಗಳಲ್ಲಿ ಐಸೊಲೇಶನ್ ವಾರ್ಡ್!

Update: 2020-04-01 11:55 GMT

ಮಂಗಳೂರು, ಎ.1: ಕೊರೋನ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ರೈಲು ಬೋಗಿಗಳಲ್ಲಿ ಐಸೋಲೇಶನ್ ವಾರ್ಡ್ ತೆರೆಯುವ ನಿಟ್ಟಿನಲ್ಲಿ ಭಾರತೀಯ ರೈಲ್ವೆ ಮಂಡಳಿ ಕೊಂಕಣ ರೈಲ್ವೆ ಹಾಗೂ ದಕ್ಷಿಣ ರೈಲ್ವೆಗೆ ಸುತ್ತೋಲೆ ಹೊರಡಿಸಿದ್ದು, ಮಂಗಳೂರಿನಲ್ಲಿ ರೈಲ್ವೆ ಬೋಗಿಗಳಲ್ಲಿ ಐಸೋಲೇಶನ್ ವಾರ್ಡ್ ತೆರೆಯಲು ಸಿದ್ಧತೆ ನಡೆಸಲಾಗುತ್ತಿದೆ.

ಮಂಗಳೂರು ರೈಲ್ವೇ ಡಿಪೋ 20 ಬೋಗಿಗಳನ್ನು ಗುರುತಿಸಿದ್ದು, ಕೊರೊನಾ ಸಂಬಂಧಿಸಿದಂತೆ ಬೋಗಿಗಳಲ್ಲಿ ಐಸೋಲೇಶನ್ ವಾರ್ಡ್ ತೆರೆಯಲು ಸಿದ್ಧತೆ ನಡೆಸಿದೆ ದಕ್ಷಿಣ ರೈಲ್ವೇಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ  ಕೊರೋನ ವೈರಸ್ ಹಿನ್ನೆಲೆಯಲ್ಲಿ ರೈಲ್ವೆ ಸೇರಿದಂತೆ ಎಲ್ಲ ವಿಭಾಗಗಳಿಗೆ ರೈಲ್ವೆ ಮಂಡಳಿ ಸುತ್ತೋಲೆ ರವಾನಿಸಿದೆ.

ಪ್ಯಾರಾ ಮೆಡಿಕಲ್ ಸಿಬ್ಬಂದಿ ಹಾಗೂ ತರಬೇತಿ ಹೊಂದಿದ ವೈದ್ಯಕೀಯ ಸಿಬ್ಬಂದಿಗಳನ್ನು ನಿಯೋಜಿಸುವಂತೆ ರೈಲ್ವೆ ಚೀಫ್ ಮೆಡಿಕಲ್ ಆಫೀಸರ್ ಸೂಚನೆ ನೀಡಿದ್ದಾರೆ.

ತಮಿಳುನಾಡಿನ ಪೆರಂಬೂರಿನಲ್ಲಿ ಖಾಲಿ ಬೋಗಿ ಹಾಗೂ ಸ್ಲೀಪರ್ ಕೋಚ್‌ಗಳನ್ನು ಐಸೋಲೇಶನ್ ವಾರ್ಡ್ ಆಗಿ ಪರಿವರ್ತಿಸುವ ಕಾರ್ಯ ನಡೆಯುತ್ತಿದೆ. ಸೀಟುಗಳನ್ನು ತೆಗೆದು ಅಗತ್ಯ ಕ್ವಾರಂಟೈನ್ ಸೌಲಭ್ಯ ನೀಡಲು, ಟಾಯ್ಲೆಟ್, ಬಾತ್‌ರೂಂ ಸೌಲಭ್ಯ ಕಲ್ಪಿಸಲು ಕೋಚ್ ಗಳ ಮರು ವಿನ್ಯಾಸದ ಕಾರ್ಯನಡೆಯುತ್ತಿದೆ.

ವೈದ್ಯರು, ದಾದಿಯರು, ಅರೆ ವೈದ್ಯಕೀಯ ಸಿಬ್ಬಂದಿಗಳಿಗೆ ಪುಟ್ಟ ಕೊಠಡಿ, ವೈದ್ಯಕೀಯ ಉಪಕರಣಗಳನ್ನು ಜೋಡಿಸಲು ವ್ಯವಸ್ಥೆಯನ್ನು ಬೋಗಿಯಲ್ಲೇ ಕಲ್ಪಿಸಲಾಗುತ್ತದೆ. ಹಾಗೆ ಉತ್ತರ ಭಾರತದ ಕೊರೋನ ಸೋಂಕಿತರಿಗೆ ವ್ಯವಸ್ಥೆ ಕಲ್ಪಿಸಲು ಹೊಸದಿಲ್ಲಿಯ ರೈಲ್ವೆ ವರ್ಕ್ ಶಾಪ್ ನಲ್ಲಿ ಮರು ವಿನ್ಯಾಸ ಕೆಲಸ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News