ಉಡುಪಿ: ಐಸೋಲೇಷನ್ ವಾರ್ಡಿಗೆ ಬುಧವಾರ 13 ಮಂದಿ ದಾಖಲು

Update: 2020-04-01 14:05 GMT

ಉಡುಪಿ, ಎ.1: ನೋವೆಲ್ ಕೊರೋನ ವೈರಸ್ (ಕೋವಿಡ್-19) ಸಮಸ್ಯೆ ದೇಶಾದ್ಯಂತ ವೇಗವಾಗಿ ವಿಸ್ತರಿಸುತ್ತಿರುವ ಮಧ್ಯೆ ಉಡುಪಿ ಜಿಲ್ಲೆಯಲ್ಲಿ ಬುಧವಾರ ಒಟ್ಟು 13 ಮಂದಿ ಶಂಕಿತ ಕೊರೋನ ವೈರಸ್ ಸೋಂಕಿಗಾಗಿ ಜಿಲ್ಲೆಯ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಇವರಲ್ಲಿ ಒಟ್ಟು 11 ಮಂದಿಯ ಗಂಟಲು ದ್ರವವನ್ನು ಸಂಗ್ರಹಿಸಿ ಸೋಂಕಿನ ಪರೀಕ್ಷೆಗಾಗಿ ಶಿವಮೊಗ್ಗ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಶಂಕಿತ ಕೊರೋನ ವೈರಸ್‌ಗಾಗಿ ಒಟ್ಟು 10 (9 ಮಂದಿ ಪುರುಷರು, ಓರ್ವ ಮಹಿಳೆ) ಮಂದಿ ಹಾಗೂ ಉಸಿರಾಟದ ತೊಂದರೆಗಾಗಿ ಮೂವರು (ಒಬ್ಬ ಪುರುಷ, ಇಬ್ಬರು ಮಹಿಳೆಯರು) ಇಂದು ಆಸ್ಪತ್ರೆಯ ಪ್ರತ್ಯೇಕಿತ ವಾರ್ಡಿಗೆ ಸೇರ್ಪಡೆಗೊಂಡಿದ್ದಾರೆ. ಇವರಲ್ಲಿ ಉಸಿರಾಟ ತೊಂದರೆಯ ಮೂವರು ಹಾಗೂ ಶಂಕಿತ ಕೋವಿಡ್‌ನ ಎಂಟು ಮಂದಿ ಸೇರಿದಂತೆ ಒಟ್ಟು 11 ಮಂದಿಯ ಮಾದರಿಯನ್ನು ಸಂಗ್ರಹಿಸಿ ಸೋಂಕಿನ ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ಅವರು ವಿವರಿಸಿದರು.

ಈ ಮೂಲಕ ಜಿಲ್ಲೆಯಲ್ಲಿ ಒಟ್ಟು 171 ಮಂದಿ ಶಂಕಿತರ ಸ್ಯಾಂಪಲ್‌ಗಳನ್ನು ಈಗಾಗಲೇ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಇವರಲ್ಲಿ 140 ಮಂದಿಯ ವರದಿ ಮಾತ್ರ ಇದುವರೆಗೆ ಬಂದಿದೆ. ಇದರಲ್ಲಿ 137 ಮಂದಿಯ ವರದಿ ನೆಗೆಟಿವ್ ಆಗಿದ್ದರೆ, ಮೂವರಲ್ಲಿ ಮಾತ್ರ ಸೋಂಕು ಪತ್ತೆಯಾಗಿದೆ. ಇನ್ನು ಮಂಗಳವಾರ ಕಳುಹಿಸಿದ 20 ಹಾಗೂ ಇಂದು ಕಳುಹಿಸಿದ 11 ಮಂದಿ ಸೇರಿದಂತೆ ಒಟ್ಟು 31 ಮಂದಿಯ ಸ್ಯಾಂಪಲ್ ವರದಿ ಬರಬೇಕಾಗಿದೆ ಎಂದು ಡಾ.ಸೂಡ ತಿಳಿಸಿದರು.

ಈವರೆಗೆ ಜಿಲ್ಲೆಯಲ್ಲಿ ಬುಧವಾರ 29 ಮಂದಿ ಸೇರಿದಂತೆ ಒಟ್ಟು 1766 ಮಂದಿ ತಪಾಸಣೆಗಾಗಿ ನೋಂದಣಿ ಮಾಡಿಕೊಂಡಿದ್ದಾರೆ. ಇವರಲ್ಲಿ ಶಂಕಿತ ಕೋವಿಡ್ ಹಾಗೂ ಅವರ ಸಂಪರ್ಕಕ್ಕೆ ಬಂದವರು ಮತ್ತು ಉಸಿರಾಟದ ತೊಂದರೆಗೆ ಸಿಲುಕಿದವರು ಸೇರಿದ್ದಾರೆ.

ಇಂದು 15 ಮಂದಿ ಸೇರಿದಂತೆ ಒಟ್ಟು 826 ಮಂದಿ 28 ದಿನಗಳ ನಿಗಾವಣೆಯನ್ನು ಪೂರ್ಣಗೊಳಿಸಿದ್ದರೆ, ಇಂದು 83 ಮಂದಿ ಸೇರಿದಂತೆ 665 ಮಂದಿ 14 ದಿನಗಳ ನಿಗಾವಣೆಯನ್ನು ಪೂರ್ಣಗೊಳಿಸಿದ್ದಾರೆ ಎಂದವರು ಹೇಳಿದರು.

ಕೋವಿಡ್ ಆಸ್ಪತ್ರೆ ಕಾರ್ಯಾರಂಭ: ನೋವೆಲ್ ಕೊರೋನ ವೈರಸ್ (ಕೋವಿಡ್-19) ಸೋಂಕಿತರ ಚಿಕಿತ್ಸೆಗಾಗಿಯೇ ನಿಯೋಜಿತವಾದ ಉಡುಪಿ ಜೋಡುಕಟ್ಟೆಯಲ್ಲಿರುವ ಡಾ.ಟಿಎಂಎ ಪೈ ಆಸ್ಪತ್ರೆ ಇಂದಿನಿಂದ ಕಾರ್ಯಾರಂಭ ಮಾಡಿದೆ. ಜಿಲ್ಲೆಯಲ್ಲಿ ಈಗಾಗಲೇ ಪತ್ತೆಯಾದ ಮೂವರು ಸೋಂಕಿತರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಯಿಂದ ಇಲ್ಲಿಗೆ ಚಿಕಿತ್ಸೆಗಾಗಿ ವರ್ಗಾಯಿಸಲಾಗಿದೆ ಎಂದು ಡಿಎಚ್‌ಓ ಡಾ.ಸೂಡ ತಿಳಿಸಿದರು.

ಕೋವಿಡ್ ಸೋಂಕು ಪತ್ತೆಯಾದವರ ಚಿಕಿತ್ಸೆಗಾಗಿಯೇ ಈ ಆಸ್ಪತ್ರೆ ಮೀಸಲಾಗಿರುತ್ತದೆ. ಇದಕ್ಕಾಗಿ ಬೇಕಾದ ಎಲ್ಲಾ ಸೌಲಭ್ಯಗಳನ್ನು ಈ ಆಸ್ಪತ್ರೆಯಲ್ಲಿ ಒದಗಿಸಲಾಗಿದೆ. ಸೋಂಕಿತರ ನಿಕಟವರ್ತಿಗಳು ಸೇರಿದಂತೆ ಇಲ್ಲಿಗೆ ಯಾವುದೇ ಹೊರಗಿನವರ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಶಂಕಿತರು ಹಾಗೂ ರೋಗಿಗಳು ಇಲ್ಲಿಗೆ ನೇರವಾಗಿ ಬರುವಂತಿಲ್ಲ. ಕೇವಲ ಸೋಂಕು ಪತ್ತೆಯಾದವರನ್ನು ಮಾತ್ರ ಅವರಿರುವ ಆಸ್ಪತ್ರೆಗಳ ಐಸೋಲೇಷನ್ ವಾರ್ಡಿನಿಂದ ಈ ಕೋವಿಡ್ ಆಸ್ಪತ್ರೆಗೆ ವರ್ಗಾಯಿಸಲಾಗುತ್ತದೆ.

ಈಗ ಜಿಲ್ಲೆಯಲ್ಲಿ ಕ್ವಾರಂಟೈನ್‌ನಲ್ಲಿರುವ 75 ಹೈರಿಸ್ಕ್ ಹಾಗೂ 91 ಲೋರಿಸ್ಕ್ ಶಂಕಿತರು ಸೇರಿದಂತೆ ಒಟ್ಟು 166 ಮಂದಿಯನ್ನು ಇದೀಗ ಸಾಂಸ್ಥಿಕ ಕ್ವಾರಂಟೈನ್ ಸೌಲಭ್ಯ ಇರುವ ಕೇಂದ್ರಗಳಿಗೆ ವರ್ಗಾಯಿಸಲಾಗಿದೆ. ಇವರಲ್ಲಿ ಕೊರೋನ ಬಾಧಿತ ಪ್ರದೇಶಗಳಿಂದ ಬಂದ ಶಂಕಿತರು ಹಾಗೂ ಈಗಾಗಲೇ ಸೋಂಕಿತರ ಸಂಪರ್ಕಕ್ಕೆ ಬಂದವರು ಸೇರಿದ್ದಾರೆ ಎಂದು ಡಿಎಚ್‌ಓ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News