ವಿದೇಶದಿಂದ ಆಗಮಿಸಿದ್ದ ಪುತ್ತೂರಿನ ವ್ಯಕ್ತಿಗೆ ಕೊರೋನ ಸೋಂಕು ದೃಢ

Update: 2020-04-01 14:22 GMT
ಸಾಂದರ್ಭಿಕ ಚಿತ್ರ

ಮಂಗಳೂರು, ಎ.1: ವಿದೇಶದಿಂದ ಆಗಮಿಸಿದ್ದ ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ವ್ಯಕ್ತಿಗೆ ಕೊರೋನ ಸೋಂಕು ತಗುಲಿರುವುದು ಬುಧವಾರ ದೃಢಪಟ್ಟಿದೆ. ಇದರೊಂದಿಗೆ ದ.ಕ.ಜಿಲ್ಲೆಯಲ್ಲಿ ಕೊರೋನ ಸೋಂಕಿತರ ಸಂಖ್ಯೆ 9ಕ್ಕೇರಿದೆ.

ದುಬೈಯಲ್ಲಿದ್ದ ಸುಮಾರು 49 ವರ್ಷ ಪ್ರಾಯದ ಈ ವ್ಯಕ್ತಿ ಮಾ.20ರಂದು ಬೆಂಗಳೂರು ವಿಮಾನ ನಿಲ್ದಾಣದ ಮೂಲಕ ಆಗಮಿಸಿ ಖಾಸಗಿ ಟ್ಯಾಕ್ಸಿಯಲ್ಲಿ ಆರ್ಯಾಪು ಗ್ರಾಮದ ತನ್ನ ಮನೆಗೆ ಪ್ರವೇಶಿಸಿದ್ದರು. ಮಾ.28ರಂದು ಸಣ್ಣದಾಗಿ ಗಂಟಲಿನಲ್ಲಿ ನೋವು ಕಾಣಿಸಿಕೊಂಡ ಕಾರಣ ಪುತ್ತೂರಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅವರ ಗಂಟಲಿನ ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಎ.1ರಂದು ಅವರ ಸ್ವೀಕೃತ ವರದಿಯಲ್ಲಿ ಕೊರೋನ ಸೋಂಕು ಇರುವುದು ದೃಢಗೊಂಡಿದೆ ಎಂದು ದ.ಕ.ಜಿಲ್ಲಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಮಂಗಳೂರು ವಿಮಾನ ನಿಲ್ದಾಣದ ಮೂಲಕ ವಿದೇಶದಿಂದ ಬಂದಿದ್ದ ಭಟ್ಕಳ ಮೂಲದ ಯುವಕನಲ್ಲಿ ಮಾ.22ರಂದು ಕೊರೋನ ಸೋಂಕು ಪತ್ತೆಯಾಗಿತ್ತು. ಕಾಸರಗೋಡಿನ ವೃದ್ಧೆಯ ಸಹಿತ ನಾಲ್ವರಿಗೆ ಸೋಂಕು ತಗುಲಿರುವುದು ಮಾ.24ರಂದು ದೃಢಗೊಂಡಿತ್ತು. ನಂತರ ಬಂಟ್ವಾಳ ತಾಲೂಕಿನ ಸಜಿಪನಡು ಗ್ರಾಮದ 10 ತಿಂಗಳ ಮಗುವಿಗೆ ಮತ್ತು ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದ ಯುವಕನಿಗೆ ಕೊರೋನ ಸೋಂಕು ತಗುಲಿರುವುದು ಮಾ.27ರಂದು ಸ್ಪಷ್ಟಗೊಂಡಿತ್ತು. ಅಜ್ಜಾವರ ಗ್ರಾಮದ ವ್ಯಕ್ತಿಗೂ ಕೊರೋನ ಸೋಂಕು ಇರುವುದು ಮಾ.31ರಂದು ದೃಢಗೊಂಡಿತ್ತು. ಇದೀಗ ಆರ್ಯಾಪು ಗ್ರಾಮದ 49ರ ಹರೆಯದ ವ್ಯಕ್ತಿಗೆ ಕೊರೋನ ಸೋಂಕು ಇರುವುದು ದೃಢಗೊಂಡಿದೆ. ಇದರೊಂದಿಗೆ ದ.ಕ.ಜಿಲ್ಲೆಯ ಮೂಲದ ನಾಲ್ವರಿಗೆ ಕೊರೋನ ಸೋಂಕು ತಗಲಿದಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News