ಮಂಗಳೂರು: ಪ್ರಧಾನಿ-ಗೃಹ ಸಚಿವರ ಅವಹೇಳನಗೈದ ಆರೋಪಿಗೆ ನ್ಯಾಯಾಂಗ ಬಂಧನ

Update: 2020-04-01 14:32 GMT

ಮಂಗಳೂರು, ಎ.1: ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವರ ವಿರುದ್ಧ ಫೇಸ್‌ಬುಕ್‌ನಲ್ಲಿ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿ ಸುಳ್ಳು ವದಂತಿ ಹರಡಿಸಿದ ಆರೋಪದ ಮೇಲೆ ಉಳಾಯಿಬೆಟ್ಟು ನಿವಾಸಿ ನಿಝಾಮ್ ಯಾನೆ ನಿಚ್ಚು (35) ಎಂಬಾತನನ್ನು ಪಾಂಡೇಶ್ವರ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಕೊರೋನ ಕಾಯಿಲೆ ಬಗ್ಗೆ ಕೇಂದ್ರ ಗೃಹ ಸಚಿವರು ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಅರ್ಥ ಬರುವ ರೀತಿಯಲ್ಲಿ ಬರೆದು ತನ್ನ ಫೇಸ್ ಬುಕ್ ಖಾತೆಯಲ್ಲಿ ಆರೋಪಿ ನಿಝಾಮ್ ಮಾ.26 ರಂದು ಪೋಸ್ಟ್ ಮಾಡಿದ್ದ. ಹಾಗೆಯೇ ಮಾ.23ರಂದು ಪ್ರಧಾನಿ ವಿರುದ್ಧ ಅವಹೇಳನಕಾರಿಯಾಗಿ ತನ್ನ ಫೇಸ್‌ಬುಕ್‌ನಲ್ಲಿ ಬರೆದು ಪೋಸ್ಟ್ ಮಾಡಿದ್ದ ಎಂದು ಬಿಜೆಪಿ ದ.ಕ. ಜಿಲ್ಲಾ ವಕ್ತಾರ ಜಗದೀಶ್ ಶೇಣವ ಆರೋಪಿಸಿ, ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಪಾಂಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಅದರಂತೆ ಪೊಲೀಸರು ಆರೋಪಿಯನ್ನು ಬಂಧಿಸಿ ಸೆ.153(ಎ) ಮತ್ತು ಸೆ.505 ಅನ್ವಯ ಪ್ರಕರಣ ದಾಖಲಿಸಿದ್ದರು.

ಪ್ರಧಾನಿ ಮತ್ತು ಗೃಹ ಸಚಿವರು ದೇಶದ ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಕೆಲಸ ಮಾಡುತ್ತಿದ್ದಾರೆ. ಪ್ರಧಾನಿ ಕೊರೋನ ಬಗ್ಗೆ ಜಾಗೃತಿ ಮೂಡಿಸಿ ಮುಂಜಾಗ್ರತೆ ವಹಿಸಲು ದೇಶದಲ್ಲಿಯೇ ಲಾಕ್‌ಡೌನ್ ಘೋಷಿಸಿದ್ದಾರೆ. ಕೇಂದ್ರ ಗೃಹ ಸಚಿವರು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆಯ ಅಧ್ಯಕ್ಷರಾಗಿದ್ದು, ಕೊರೋನ ಹರಡುವುದನ್ನು ತಡೆಯಲು ವಿವಿಧ ಕ್ರಮ ವಹಿಸಿದ್ದಾರೆ. ಹಾಗಿರುವಾಗ ಈ ಇಬ್ಬರು ನಾಯಕರ ಬಗ್ಗೆ ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ ಬರುವಂತೆ ಸುಳ್ಳು ವದಂತಿ ಹರಡುವುದು ಸರಿಯಲ್ಲ ಎಂದು ಜಗದೀಶ್ ಶೇಣವ ದೂರಿನಲ್ಲಿ ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News