ಮನೆ ಕ್ವಾರಂಟೈನ್‌ನಲ್ಲಿರುವವರಿಗೆ ಎಚ್ಚರಿಕೆ ಗಂಟೆ

Update: 2020-04-01 15:07 GMT

ಉಡುಪಿ, ಎ.1: ನೋವೆಲ್ ಕೊರೋನ ಬಾಧಿತ ದೇಶಗಳಿಂದ ಸ್ವದೇಶಕ್ಕೆ ಮರಳಿ, ಅವರವರ ಮನೆಗಳಲ್ಲಿ ಕ್ವಾರಂಟೈನ್‌ನಲ್ಲಿರುವವರು ಹಾಗೂ ಅವರ ಕುಟುಂಬಿಕರು ಮತ್ತು ಅವರ ಸಂಪರ್ಕಕ್ಕೆ ಬಂದವರಿಗೆ ರಾಜ್ಯ ಸರಕಾರ ಎಚ್ಚರಿಕೆಯ ಗಂಟೆಯೊಂದನ್ನು ಬಾರಿಸಿದೆ.

ಈಗ ಹೋಮ್ ಕ್ವಾರಂಟೈನ್‌ನಲ್ಲಿರುವವರ ಮೇಲೆ ದಿನದ 24 ಗಂಟೆಗಳ ನಿಗಾಕ್ಕಾಗಿ ಕರ್ನಾಟಕ ಸರಕಾರ ಆ್ಯಪ್ ಒಂದನ್ನು ಅಭಿವೃದ್ಧಿ ಪಡಿಸಿದ್ದು, ಗೂಗಲ್ ಪ್ಲೇಸ್ಟೋರಿನಿಂದ ಅದನ್ನು ಡೌನ್‌ಲೋಡ್ ಮಾಡಿಕೊಂಡು ಎಲ್ಲರೂ ತಮ್ಮ ಮೊಬೈಲ್‌ಗಳಲ್ಲಿ ಅಳವಡಿಸಿಕೊಳ್ಳಬೇಕಾಗಿದೆ.
ಈ ಆ್ಯಪ್ ಮೂಲಕ ಪ್ರತಿಯೊಬ್ಬರೂ ತಾವಿದ್ದ ಮನೆಯಿಂದಲೇ ಪ್ರತಿ ಗಂಟೆಗೊಮ್ಮೆ ತಮ್ಮ ಸೆಲ್ಫಿ ಪೋಟೊ ತೆಗೆದು ಅಪ್‌ಲೋಡ್ ಮಾಡಬೇಕಾಗಿದೆ. ರಾತ್ರಿ 10ಗಂಟೆಯಿಂದ ಬೆಳಗ್ಗೆ 7 ಗಂಟೆಯವರೆಗೆ ಇದರಿಂದ ವಿನಾಯಿತಿ ಇದೆ ಎಂದು ಸರಕಾರದ ಪ್ರಕಟಣೆ ತಿಳಿಸಿದೆ.

ಒಂದು ವೇಳೆ ಮನೆಯ ನಿರ್ಬಂಧದಲ್ಲಿದ್ದಾಗ ಪ್ರತಿ ಗಂಟೆಗೊಮ್ಮೆ ಸೆಲ್ಫಿಯನ್ನು ಅಪ್‌ಲೋಡ್ ಮಾಡದೇ ಇದ್ದರೆ, ಜಿಪಿಎಸ್ ಮೂಲಕ ಅವರ ಜಾಡನ್ನು ಸೆರೆ ಹಿಡಿದು, ಮನೆಯ ಕ್ವಾರಂಟೈನ್‌ನಿಂದ ಸಮೂಹ ಸಂಪರ್ಕ ನಿಷೇಧಿತ ಜಾಗಕ್ಕೆ ಎಲ್ಲರನ್ನೂ ವರ್ಗಾಯಿಸಲಾಗುತ್ತದೆ ಎಂದು ಎಲ್ಲರಿಗೂ ಎಚ್ಚರಿಕೆ ನೀಡಲಾಗಿದೆ.

ಸರಕಾರದ ಪರಿಶೀಲನಾ ಸಮಿತಿಯೊಂದು ಈ ಎಲ್ಲಾ ಪೋಟೋಗಳನ್ನು ತಾಳೆ ನೋಡಲಿದೆ. ಆದುದರಿಂದ ಈಗ ಹೋಮ್ ಕ್ವಾರಂಟೈನ್‌ನಲ್ಲಿರುವರೆಲ್ಲರೂ ತಪ್ಪದೇ ತಮ್ಮ ಸೆಲ್ಫಿ ಪೋಟೊ ಆ್ಯಪ್ ಮೂಲಕ ಅಪ್‌ಲೋಡ್ ಮಾಡುವಂತೆ ತಿಳಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ: 104, 9745697456, 08046848609, 08066692000 ಈ ನಂಬರ್‌ನ್ನು ಸಂಪರ್ಕಿಸುವಂತೆ ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News