ರೈತರು ಬೆಳೆದ ಹಣ್ಣು, ತರಕಾರಿ ಸಾಗಾಟಕ್ಕೆ ತೋಟಗಾರಿಕಾ ಇಲಾಖೆಯಿಂದ ಸೂಕ್ತಕ್ರಮ: ಉಡುಪಿ ಡಿಸಿ

Update: 2020-04-01 15:28 GMT

ಉಡುಪಿ, ಎ.1: ಜಿಲ್ಲೆಯ ರೈತರು ಬೆಳೆದ ಹಣ್ಣು ಮತ್ತು ತರಕಾರಿಗಳನ್ನು ಸಾಗಾಟ ಮಾಡಲು ತೋಟಗಾರಿಕಾ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಜಿಲ್ಲೆಯ ಅನೇಕ ರೈತರು ಮಟ್ಟುಗುಳ್ಳ, ಕಲ್ಲಂಗಡಿ, ಅನಾನಸ್ಸು ಮುಂತಾದ ಶೀಘ್ರ ಹಾಳಾಗುವ ಹಣ್ಣು ಮತ್ತು ತರಕಾರಿಗಳನ್ನು ಬೆಳೆದಿದ್ದು, ಈ ತರಕಾರಿ- ಹಣ್ಣುಗಳನ್ನು ಮಾರುಕಟ್ಟೆಗೆ ಕಳುಹಿಸಲು ಸಾದ್ಯವಾಗದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಉಡುಪಿ ಜಿಲ್ಲೆಯ ರೈತರು ಬೆಳೆದ ಉತ್ಪನ್ನಗಳನ್ನು ಜಿಲ್ಲೆ, ಹೊರಜಿಲ್ಲೆ ಹಾಗೂ ಹೊರರಾಜ್ಯಗಳ ಮಾರುಕಟ್ಟೆಗೆ ಸಾಗಾಟ ಮಾಡಲು ಅನುಕೂಲ ವಾಗುವಂತೆ 7 ವಾಹನಗಳಿಗೆ ಅನುಮತಿ ಪತ್ರವನ್ನು ಒದಗಿಸಿಕೊಡಲಾಗಿದೆ.

ಜಿಲ್ಲೆಯಲ್ಲಿ ಪ್ರಸಕ್ತ 25 ಹೆಕ್ಟೇರ್ ಪ್ರದೇಶದಲ್ಲಿ 1000 ಮೆ.ಟನ್ ಕಲ್ಲಂಗಡಿ ಮತ್ತು 150 ಹೆಕ್ಟೇರ್ ಪ್ರದೇಶದಲ್ಲಿ 9732 ಮೆ.ಟನ್ ಅನಾನಸ್ ಉತ್ಪಾದನೆ ಯಾಗುವ ಹಾಗೂ ಮಾರುಕಟ್ಟೆಯಾಗದೆ ಇರುವ ಅಂದಾಜಿದೆ.

ಪ್ರಸಕ್ತ ಜಿಲ್ಲೆಯ ರೈತರು ಬೆಳೆದ 6 ಮೆ.ಟನ್ ಮಟ್ಟು ಗುಳ್ಳವನ್ನು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ, 82 ಮೆ.ಟನ್ ಕಲ್ಲಂಗಡಿಯನ್ನು ಮಂಗಳೂರು, ಉತ್ತರ ಕನ್ನಡ, ಧಾರವಾಡ ಜಿಲ್ಲೆಗಳಿಗೆ, 13 ಮೆ.ಟನ್‌ಅನಾನಸ್‌ನ್ನು ಶಿವಮೊಗ್ಗ, ಬೆಳ್ತಂಗಡಿ (ದ.ಕ.)ಗಳಿಗೆ, 20 ಮೆ.ಟನ್‌ಬಾಳೆಯನ್ನು ಉತ್ತರ ಕನ್ನಡ, ಬೆಳ್ತಂಗಡಿ (ದ.ಕ.) ಜಿಲ್ಲೆಗೆ ಹಾಗೂ 10 ಮೆ.ಟನ್ ಪಪ್ಪಾಯವನ್ನು ಉತ್ತರ ಕನ್ನಡ ಜಿಲ್ಲೆಗೆ ಕಳುಹಿಸಲು ಅಗತ್ಯಕ್ರಮ ಕೈಗೊಳ್ಳಲಾಗಿದೆ.

ಅಲ್ಲದೇ ಉಡುಪಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ, ಹಣ್ಣುಗಳ ಸಗಟು ವ್ಯಾಪಾರಸ್ತರ ಸಭೆ ಕರೆದು ಜಿಲ್ಲೆಯ ರೈತರಿಂದ 35 ಮೆ. ಟನ್ ಅನಾನಸ್ಸು, 5,000 ಗೊನೆ ಬಾಳೆ, 55 ಮೆ. ಟನ್ ಕಲ್ಲಂಗಡಿಯನ್ನು ಮುಂದಿನ ಎರಡು ದಿನಗಳಲ್ಲಿ ರೈತರಿಂದ ಖರೀದಿಸಿ, ಮಾರಾಟ ಮಾಡಲು ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News