ಗುರುಪುರ: ತಿಂಗಳಾರಂಭದಲ್ಲೇ ಬಾಡಿಗೆ ವಸೂಲಿ ಆರಂಭ; ಬಾಡಿಗೆದಾರರ ಆರೋಪ

Update: 2020-04-01 16:30 GMT

ಗುರುಪುರ, ಎ.1: ಕೊರೋನ ಭೀತಿಯಿಂದ ದಿನಗೂಲಿ ಕಾರ್ಮಿಕರು ಕೆಲಸವಿಲ್ಲದೆ ಕಂಗಾಲಾಗಿದ್ದಾರೆ. ಬಹುತೇಕ ದಿನಗೂಲಿ ಮಂದಿ ಬಾಡಿಗೆ ಮನೆಗಳಲ್ಲಿ ವಾಸ ಮಾಡಿಕೊಂಡಿದ್ದಾರೆ. ಇಂತಹವರಿಂದ ಒಂದು ತಿಂಗಳ ಮಟ್ಟಿಗೆ ಬಾಡಿಗೆ ವಸೂಲಿ ಮಾಡಬಾರದು ಎಂದು ಸರಕಾರ ಆದೇಶ ಹೊರಡಿಸಿದ್ದರೂ ಕೂಡ ಗುರುಪುರ ಸುತ್ತಮುತ್ತಲಿನ ಪ್ರದೇಶದ ದಿನಗೂಲಿಗಳಿಂದ ಎ.1ರಿಂದಲೇ ಬಾಡಿಗೆ ವಸೂಲಿ ಆರಂಭವಾಗಿದೆ ಎಂಬ ಆರೋಪ ಕೇಳಿ ಬಂದಿದೆ.

‘ಮನೆ ಮಾಲಕರು ಒಂದು ತಿಂಗಳ ಬಾಡಿಗೆ ಪಡೆಯದೆ ಅಥವಾ ಮುಂದಿನ ತಿಂಗಳು ಪಡೆಯುವರೆಂಬ ವಿಶ್ವಾಸ ನಮಗಿತ್ತು. ಆದರೆ ಈ ತಿಂಗಳು ಒಂದನೇ ತಾರೀಕಿನಂದೇ ಬಾಡಿಗೆ ನೀಡಬೇಕೆಂದು ಮನೆ ಮಾಲಕರು ತಿಳಿಸಿ, ಬಾಡಿಗೆ ಪಡೆದುಕೊಂಡಿದ್ದಾರೆ. ಸರಕಾರದ ಆದೇಶವಿದೆ ಎಂದು ಹೇಳಿದರೆ ಅವರೇನಾದರೂ ನಮಗೆ ಹಣ ನೀಡುತ್ತಾರಾ? ಬಾಡಿಗೆ ನೀಡದಿದ್ದರೆ ಮುಂದಿನ ತಿಂಗಳು ಮನೆ ಖಾಲಿ ಮಾಡಬೇಕು ಎಂಬ ಮಾತುಗಳನ್ನು ಕೇಳಬೇಕಾಗುತ್ತದೆ’ ಎಂದು ಮಹಿಳೆಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಳೆದ ತಿಂಗಳ ಬಾಡಿಗೆ ಹಣ ಪಾವತಿಸದಿದ್ದರೆ ಅಥವಾ ಮನೆ ಮಾಲಕರೊಂದಿಗೆ ‘ಸರ್ಕಾರದ ಆದೇಶವಿದೆ’ ಎಂದರೆ ಭವಿಷ್ಯದಲ್ಲಿ ಮನೆ ಖಾಲಿ ಮಾಡಬೇಕಾದ ಭೀತಿ/ಅನಿವಾರ್ಯತೆ ತಪ್ಪಿದ್ದಲ್ಲ. ಮಾನವೀಯ ನೆಲೆಯಲ್ಲಿ ತಿಂಗಳ ಬಾಡಿಗೆ ಬೇಡವೆಂದು ಮನೆ ಮಾಲಕರೇ ಹೇಳಿದರೆ ಒಳಿತಿದೆ. ಇಲ್ಲವಾದರೆ ದಿನಗೂಲಿಗಳು ಮನೆ ಬಾಡಿಗೆ ಭರಿಸಲೇಬೇಕಾಗುತ್ತದೆ ಎಂದು ಕೆಲವರು ಅಳಲು ತೋಡಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News