ಕೊರೋನ ಹೆಸರಲ್ಲಿ ಮುಸ್ಲಿಮರನ್ನು ಟಾರ್ಗೆಟ್ ಮಾಡುವ ಷಡ್ಯಂತ್ರ: ಎಸ್‌ವೈಎಸ್ ಆರೋಪ

Update: 2020-04-01 17:04 GMT

ಮಂಗಳೂರು, ಎ.1: ಜಗತ್ತು ಮಹಾಮಾರಿ ಕೊರೋನ ವಿರುದ್ಧ ಹೋರಾಡುತ್ತಿದ್ದರೆ ತಲೆಯಲ್ಲಿ ವಿಷವನ್ನು ಮಾತ್ರ ತುಂಬಿಕೊಂಡಿರುವ ಮತೀಯ ಕ್ಷುದ್ರ ಜೀವಿಗಳು ವೈರಸನ್ನು ಮತಾಂತರಗೊಳಿಸಿ ವಿಕೃತಿ ಮೆರೆಯುತ್ತಿದೆ. ತಬ್ಲೀಗ್ ಜಮಾಅತ್ ಬಗ್ಗೆ ಸೈದ್ಧಾಂತಿಕ ಭಿನ್ನತೆ ಇದ್ದರೂ ಕೂಡ ಮರ್ಕಝ್ ನಿಝಾಮುದ್ದೀನ್ ಸಂಸ್ಥೆಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವನ್ನು ಗುರಿಯಾಗಿಸಿಕೊಂಡು ಇಡೀ ದೇಶದಲ್ಲಿ ರೋಗ ಹರಡಿದ ಕೇಂದ್ರ ಮರ್ಕಝ್ ಎಂಬಂತೆ ಚಿತ್ರೀಕರಣ ಮಾಡುವ ಮಾಧ್ಯಮ ಮತ್ತು ಇಸ್ಲಾಮ್ ಧರ್ಮದ ವಿರುದ್ಧ ಕೆಟ್ಟ ಮನಸ್ಥಿತಿ ಹೊಂದಿದವರ ಬಗ್ಗೆ ಸಮುದಾಯ ಎಚ್ಚರಿಕೆ ವಹಿಸಬೇಕಾಗುತ್ತದೆ. ಕೊರೋನ ಹೆಸರಲ್ಲಿ ಮುಸ್ಲಿಮರನ್ನು ಟಾರ್ಗೆಟ್ ಮಾಡುವ ಷಡ್ಯಂತ್ರದ ವಿರುದ್ಧ ಹೋರಾಟ ಮಾಡುವ ಅಗತ್ಯವಿದೆ ಎಂದು ಎಸ್‌ವೈಎಸ್ ದ.ಕ.ಜಿಲ್ಲಾಧ್ಯಕ್ಷ ಯುಕೆ ಅಬ್ದುಲ್ ಅಝೀಝ್ ದಾರಿಮಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮರ್ಕಝ್‌ನಲ್ಲಿ ನಡೆಯುವ ಕಾರ್ಯಕ್ರಮಕ್ಕೆ 100 ವರ್ಷಗಳ ಇತಿಹಾಸವಿದೆ. ದೇಶ ವಿದೇಶಗಳಿಂದ ತಬ್ಲೀಗ್ ಕಾರ್ಯಕರ್ತರು ಅಲ್ಲಿ ಸೇರುತ್ತಾರೆ. ಎಲ್ಲವೂ ದೇಶದ ಕಾನೂನಿನ ಚೌಕಟ್ಟನ್ನು ಪಾಲಿಸಿ ನಡೆಸಲಾಗುತ್ತದೆ. ವಿದೇಶಗಳಿಂದ ನುಸುಳುಕೋರರಾಗಿ ಯಾರೂ ಬಂದು ಅಲ್ಲಿ ಸೇರಿದವರಲ್ಲ. ಹಾಗೇ ಅಕ್ರಮ ಚಡುವಟಿಕೆಗಳು ಯಾವುದೂ ಅಲ್ಲಿಂದ ವರದಿಯಾಗಿಲ್ಲ. ಮಾ.13ರಿಂದ 15ರ ತನಕ ಅಲ್ಲಿ ಕಾರ್ಯಕ್ರಮ ನಡೆದಿರುತ್ತದೆ. ದೇಶದಲ್ಲಿ ಕೊರೋನದ ತೊಂದರೆ ಇಲ್ಲಾ ಎಂದು ಮಾ.13ರಂದು ದೇಶದ ಆರೋಗ್ಯ ಇಲಾಖೆಯು ಪ್ರಕಟನೆ ಹೊರಡಿಸುತ್ತದೆ. ಆದರೆ ದೇಶದಲ್ಲಿ ಕರ್ಫ್ಯೂ ಜಾರಿಗೆ ಬರುವುದು ಮಾ.22ರಂದು. ಹಾಗಾಗಿ ವಿದೇಶಿಯರು ಅವರ ದೇಶಕ್ಕೆ ಹೊಗಲು ಸಾಧ್ಯವಾಗದೆ ದೆಹಲಿಯಲ್ಲೇ ಉಳಿಯಬೇಕಾಯಿತು. ಕರ್ಫ್ಯೂ ಘೋಷಣೆ ಆದ ಬಳಿಕ ಮಾ.25ರಂದೇ ಆರೋಗ್ಯ ಇಲಾಖೆಯವರಿಂದ ಸಂಪೂರ್ಣ ತಪಾಸಣೆಗೆ ಅವರೆಲ್ಲರೂ ಒಳಪಡುತ್ತಾರೆ. ಹಲವರು ಕ್ವಾರಂಟೈನ್‌ನಲ್ಲಿ ನಿರ್ಬಂಧಕ್ಕೆ ಒಳಗಾಗಿದ್ದಾರೆ. ಯಾರೂ ತುರ್ತುಸ್ಥಿತಿಯಲ್ಲಿ ಕಾನೂನನ್ನು ಉಲ್ಲಂಘಿಸಲು ಮುಂದಾಗಿಲ್ಲ. ಆದರೂ ಅವರಲ್ಲಿ ಅನೇಕ ಮಂದಿ ವೈರಸಿಗೆ ಬಲಿಯಾಗಿರೋದು ನಿಜ. ಹಾಗಂತ ಅವರನ್ನು ಅಪರಾಧಿಗಳಾಗಿ ಕಾಣುವುದು ಎಷ್ಟು ಸರಿ ಎಂದು ಅಝೀಝ್ ದಾರಿಮಿ ಪ್ರಶ್ನಿಸಿದ್ದಾರೆ.

 ಮಾ.15ರವರೆಗೆ ಸಿದ್ದಿವಿನಾಯಕ ಮಹಾಲಿಂಗೇಶ್ವರ ದೇವಸ್ಥಾನ ತೆರೆದುಕೊಂಡಿತ್ತು. 16ರ ತನಕ ಶಿರಡಿ ಕ್ಷೇತ್ರ ತೆರೆದಿತ್ತು. 17ರ ತನಕ ವೈಷ್ಣೋದೇವಿ ದೇವಸ್ಥಾನವೂ ಭಕ್ತರಿಂದ ತುಂಬಿತ್ತು. 20ರ ತನಕ ಕಾಶಿ ವಿಶ್ವನಾಥ ಕ್ಷೇತ್ರವೂ ತೆರೆದಿತ್ತು. ಜನತಾ ಕರ್ಫ್ಯೂ ಬಳಿಕ ಅಯೋಧ್ಯೆಯಲ್ಲಿ ವಿಶೇಷ ಕಾರ್ಯಕ್ರಮದಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು. ಗೋಮೂತ್ರ ಪಾರ್ಟಿಯೂ ನಡೆದಿತ್ತು. ವಸ್ತುಸ್ಥಿತಿ ಹೀಗಿದ್ದರೂ ಕೂಡಾ ದೆಹಲಿಯಲ್ಲಿ ಮಾ.15ರ ತನಕ ನಡೆದ ಕಾರ್ಯಕ್ರಮ ಅಪರಾಧವಾಗುತ್ತದೆ ಎನ್ನುವುದು ವಿಪರ್ಯಾಸವಾಗಿದೆ. ದೇಶದಲ್ಲಿ ನಡೆಯುವ ಪ್ರತಿಯೊಂದು ಘಟನೆಯನ್ನು ಮತೀಯ ದ್ವೇಷದ ಮಾಪನದಲ್ಲಿ ಅಳತೆ ಮಾಡುವುದು ಮಾಧ್ಯಮ ವರ್ಗದ ಕಸುಬಾಗಿ ಬಿಟ್ಟಿರುವುದು ಖಂಡನೀಯ. ಕೊರೋನವನ್ನು ಇಸ್ಲಾಮೀಕರಣ ಮಾಡಿ ಮುಸ್ಲಿಮರನ್ನು ಟಾರ್ಗೆಟ್ ಮಾಡುವ ಷಡ್ಯಂತ್ರದ ವಿರುದ್ಧ ಹೋರಾಟ ಮಾಡುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News