ವಲಸೆ ಕಾರ್ಮಿಕರಿಗೆ ಸಾಮಾಜಿಕ ರಕ್ಷಣೆ ಅಗತ್ಯ: ಆರೋಗ್ಯ ಸಚಿವಾಲಯ

Update: 2020-04-01 17:25 GMT

ಹೊಸದಿಲ್ಲಿ, ಎ.1: ಲಾಕ್‌ಡೌನ್ ಸ್ಥಿತಿಯಲ್ಲಿ ಸಾಮಾಜಿಕ,ಮಾನಸಿಕ ಮತ್ತು ಭಾವನಾತ್ಮಕ ಯಾತನೆಗಳಿಗೆ ಸುಲಭಭೇದ್ಯರಾಗಿರುವ ವಲಸೆ ಕಾರ್ಮಿಕರಿಗೆ ಸಾಮಾಜಿಕ ರಕ್ಷಣೆಯನ್ನೊದಗಿಸುವಂತೆ ಆರೋಗ್ಯ ಸಚಿವಾಲಯವು ಬುಧವಾರ ಕರೆ ನೀಡಿದೆ.

 ಇಂತಹ ವಲಸೆ ಕಾರ್ಮಿಕರು ಎದುರಿಸುತ್ತಿರುವ ತಕ್ಷಣದ ಕಳವಳಗಳು ಆಹಾರ, ಆರೋಗ್ಯ ರಕ್ಷಣೆ, ಸೋಂಕಿಗೆ ಗುರಿಯಾಗುವ ಅಥವಾ ಸೋಂಕನ್ನು ಹರಡುವ ಭೀತಿ, ವೇತನ ನಷ್ಟ ಇತ್ಯಾದಿಗಳಿಗೆ ಸಂಬಂಧಿಸಿದ್ದು,ಕುಟುಂಬದ ಬಗ್ಗೆ ಕಳವಳ, ಆತಂಕ ಮತ್ತು ಭೀತಿಯೂ ಅವರನ್ನು ಕಾಡುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಿರುವ ಸಚಿವಾಲಯವು, ಕೆಲವೊಮ್ಮೆ ಸ್ಥಳೀಯ ಸಮುದಾಯದ ಕಿರುಕುಳ ಮತ್ತು ನಕಾರಾತ್ಮಕ ಪ್ರತಿಕ್ರಿಯೆಗಳನ್ನೂ ಅವರು ಎದುರಿಸಬೇಕಾಗುತ್ತದೆ. ತಮ್ಮ ಸ್ವಗ್ರಾಮಗಳಿಗೆ ಮರಳುವ ಪ್ರಯತ್ನದಲ್ಲಿ ಕ್ವಾರಂಟೈನ್ ಕೇಂದ್ರಗಳೂ ಆಗಿರಬಹುದಾದ ಆಶ್ರಯ ತಾಣಗಳಲ್ಲಿ ಕೆಲವು ದಿನಗಳನ್ನು ಕಳೆಯುವ ಸ್ಥಿತಿಯನ್ನೆದುರಿಸುತ್ತಿರುವ ವಲಸೆ ಕಾರ್ಮಿಕರಲ್ಲಿ ವಿವಿಧ ಕಳವಳಗಳಿಂದಾಗಿ ಆತಂಕ ಮತ್ತು ಭೀತಿ ತುಂಬಿರುತ್ತವೆ ಮತ್ತು ಅವರಿಗೆ ಮನೋವೈಜ್ಞಾನಿಕ-ಸಾಮಾಜಿಕ ಬೆಂಬಲದ ಅಗತ್ಯವಿರುತ್ತದೆ ಎಂದಿದೆ.

ಇಂತಹ ಬೆಂಬಲದ ಭಾಗವಾಗಿ ಕೆಲವು ಕ್ರಮಗಳನ್ನು ಸಚಿವಾಲಯವು ಪಟ್ಟಿ ಮಾಡಿದ್ದು,ಪ್ರತಿ ವಲಸೆ ಕಾರ್ಮಿಕನನ್ನೂ ಘನತೆ, ಗೌರವ, ಅನುಭೂತಿ ಮತ್ತು ಅನುಕಂಪದಿಂದ ನೋಡಿಕೊಳ್ಳುವುದು, ಪ್ರತಿ ವ್ಯಕ್ತಿ/ಕುಟುಂಬದ ನಿರ್ದಿಷ್ಟ ಮತ್ತು ವಿಭಿನ್ನ ಅಗತ್ಯಗಳನ್ನು ಗುರುತಿಸುವುದು ಮತ್ತು ಇದೊಂದು ಅಸಾಧಾರಣ ಅನಿಶ್ಚಿತತೆಯ ಸ್ಥಿತಿಯಾಗಿದೆ ಮತ್ತು ಇದು ತಾತ್ಕಾಲಿವಾಗಿದೆಯೇ ಹೊರತು ಶಾಶ್ವತವಲ್ಲ. ಸಾಮಾನ್ಯ ಜನಜೀವನ ಶೀಘ್ರವೇ ಸಾಧ್ಯವಾಗಲಿದೆ ಎಂಬ ಭರವಸೆಯನ್ನು ಅವರಲ್ಲಿ ಮೂಡಿಸುವುದು ಇತ್ಯಾದಿಗಳು ಈ ಕ್ರಮಗಳಲ್ಲಿ ಸೇರಿವೆ.

ತಮ್ಮ ಪ್ರಸಕ್ತ ತಾಣದಲ್ಲಿ ಉಳಿದುಕೊಳ್ಳುವುದರ ಮಹತ್ವ ಮತ್ತು ಸಾಮೂಹಿಕ ಚಲನವಲನ ಹೇಗೆ ಕೊರೋನ ವೈರಸ್‌ನ್ನು ನಿಯಂತ್ರಿಸುವ ಎಲ್ಲ ಪ್ರಯತ್ನಗಳ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನುಂಟು ಮಾಡಬಲ್ಲದು ಎನ್ನುವುದರ ಬಗ್ಗೆ ಅವರಲ್ಲಿ ಅರಿವು ಮೂಡಿಸಲು ಒತ್ತು ನೀಡಬೇಕಿದೆ ಎಂದಿರುವ ಸಚಿವಾಲಯವು,ಸಮುದಾಯದಲ್ಲಿ ತಮ್ಮ ಮಹತ್ವದ ಬಗ್ಗೆ ಈ ವಲಸೆ ಕಾರ್ಮಿಕರಲ್ಲಿ ಅರಿವು ಮೂಡಿಸಬೇಕು ಮತ್ತು ಸಮಾಜಕ್ಕೆ ಅವರ ಕೊಡುಗೆಗಳನ್ನು ಪ್ರಶಂಸಿಸಬೇಕು ಎಂದಿದೆ.

ವಲಸೆ ಕಾರ್ಮಿಕರ ಉದ್ಯೋಗದಾತರು ಕೈಕೊಟ್ಟರೂ ಸ್ಥಳೀಯಾಡಳಿತ ಮತ್ತು ದತ್ತಿ ಸಂಸ್ಥೆಗಳು ಅವರಿಗೆ ಸಾಧ್ಯವಿರುವ ಎಲ್ಲ ನೆರವನ್ನೂ ಒದಗಿಸುತ್ತವೆ ಎಂಬ ವಿಶ್ವಾಸವನ್ನು ಅವರಲ್ಲಿ ಮೂಡಿಸಬೇಕು ಎಂದೂ ಆರೋಗ್ಯ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News