ತಬ್ಲೀಗಿ ಜಮಾಅತ್ ಸಮಾವೇಶದಲ್ಲಿ ಪಾಲ್ಗೊಂಡಿದ್ದವರ ಜೊತೆ ಪ್ರಯಾಣಿಸಿದ್ದವರ ಮಾಹಿತಿ ಸಂಗ್ರಹಕ್ಕೆ ಯತ್ನ

Update: 2020-04-01 17:44 GMT

ಹೊಸದಿಲ್ಲಿ, ಎ.1: ದಿಲ್ಲಿಯಲ್ಲಿ ನಡೆದಿದ್ದ ತಬ್ಲೀಗಿ ಜಮಾಅತ್ ಸಮಾವೇಶದಲ್ಲಿ ಪಾಲ್ಗೊಳ್ಳಲು ಐದು ರೈಲುಗಳಲ್ಲಿ ತೆರಳಿದ್ದ ಜನರೊಂದಿಗೆ ಅದೇ ರೈಲಿನಲ್ಲಿ ಪ್ರಯಾಣಿಸಿದ್ದ ಸಾವಿರಾರು ಜನರ ಕುರಿತು ಮಾಹಿತಿ ಒದಗಿಸಲು ರೈಲ್ವೇ ಮಂಡಳಿ ತೀವ್ರ ಪ್ರಯತ್ನ ಮುಂದುವರಿಸಿದೆ.

ಆಂಧ್ರಪ್ರದೇಶದ ಗುಂಟೂರಿಗೆ ಪ್ರಯಾಣಿಸುವ ದುರಂತೊ ಎಕ್ಸ್‌ಪ್ರೆಸ್ ರೈಲು, ಚೆನ್ನೈಗೆ ತೆರಳುವ ದಿ ಗ್ರಾಂಡ್ ಟ್ರಂಕ್ ಎಕ್ಸ್‌ಪ್ರೆಸ್, ಚೆನ್ನೈಗೆ ತೆರಳುವ ತಮಿಳುನಾಡು ಎಕ್ಸ್‌ಪ್ರೆಸ್, ನ್ಯೂಡೆಲ್ಲಿ-ರಾಂಚಿ ರಾಜಧಾನಿ ಎಕ್ಸ್‌ಪ್ರೆಸ್ ಮತ್ತು ಎಪಿ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ - ಈ ಎಲ್ಲಾ ರೈಲುಗಳೂ ಮಾರ್ಚ್ 13 ಮತ್ತು ಮಾರ್ಚ್ 19ರ ಮಧ್ಯೆ ದಿಲ್ಲಿಯಿಂದ ಪ್ರಯಾಣ ಆರಂಭಿಸಿವೆ.

ತಬ್ಲೀಗಿ ಜಮಾಅತ್‌ನಲ್ಲಿ ಪಾಲ್ಗೊಂಡಿದ್ದವರೊಂದಿಗೆ ಸಂಪರ್ಕದಲ್ಲಿದ್ದ ರೈಲು ಪ್ರಯಾಣಿಕರ ನಿರ್ದಿಷ್ಟ ಸಂಖ್ಯೆಯ ಮಾಹಿತಿ ಲಭ್ಯವಾಗಿ  ಲ್ಲ. ಪ್ರತೀ ರೈಲಿನಲ್ಲೂ ಸುಮಾರು 1000ದಿಂದ 1200 ಪ್ರಯಾಣಿಕರಲ್ಲದೆ ಸಿಬಂದಿ ವರ್ಗದವರಿರುತ್ತಾರೆ . ಪ್ರಯಾಣಿಕರ ಪಟ್ಟಿಯನ್ನು ರೈಲ್ವೇ ಮಂಡಳಿ ಜಿಲ್ಲಾ ಅಧಿಕಾರಿಗಳಿಗೆ ಒದಗಿಸುತ್ತದೆ. ಈ ಪಟ್ಟಿಯ ಹೆಸರನ್ನು ಮತ್ತು ಸಮಾವೇಶದಲ್ಲಿ ಪಾಲ್ಗೊಂಡಿದ್ದವರ ಹೆಸರನ್ನು ತುಲನೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಸಮಾವೇಶದಲ್ಲಿ ಪಾಲ್ಗೊಂಡಿದ್ದ ಇಂಡೋನೇಶಿಯಾದ 10 ಜನರು ಸಂಪರ್ಕ ಕ್ರಾಂತಿ ರೈಲಿನ ಮೂಲಕ ಕರೀಂನಗರ ಜಿಲ್ಲೆಗೆ ಮರಳಿದ್ದು ಇವರಿಗೆ ಕೊರೊನ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ.

ನ್ಯೂಡೆಲ್ಲಿ-ರಾಂಚಿ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನ ಬಿ1 ಕೋಚ್‌ನಲ್ಲಿ ಪ್ರಯಾಣಿಸಿದ್ದ ಮಲೇಶ್ಯಾದ ಮಹಿಳೆಗೂ ಕೊರೊನ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದ್ದು ಈಕೆ ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆ ಎನ್ನಲಾಗಿದೆ. ಈ ಮಹಿಳೆ ಪ್ರಯಾಣಿಸಿದ್ದ ಬೋಗಿಯಲ್ಲಿ ಸುಮಾರು 60 ಪ್ರಯಾಣಿಕರಿದ್ದರು. ಇದು ಜಾರ್ಖಂಡ್‌ನಲ್ಲಿ ದೃಢಪಟ್ಟಿರುವ ಪ್ರಥಮ ಕೊರೊನ ವೈರಸ್ ಪ್ರಕರಣವಾಗಿದೆ.

ಅಲ್ಲದೆ ದುರಂತೊ ಎಕ್ಸ್‌ಪ್ರೆಸ್ ರೈಲಿನಲ್ಲಿ ಮಾರ್ಚ್ 18ರಂದು ತಮ್ಮ ಸಂಗಾತಿಗಳೊಂದಿಗೆ ಪ್ರಯಾಣಿಸಿದ್ದ ಇಬ್ಬರು ಪ್ರಯಾಣಿಕರಿಗೆ ಕೊರೊನ ವೈರಸ್ ಸೋಂಕು ತಗಲಿದೆ. ನಿರ್ಬಂಧ ವಿಧಿಸುವ ಮೊದಲು ಈ ಸಮಾವೇಶ ನಡೆದಿರುವುದರಿಂದ ಈ ವ್ಯಕ್ತಿಗಳು ಎಲ್ಲೆಡೆ ಮುಕ್ತವಾಗಿ ಸಂಚರಿಸಿದ್ದು ಅಧಿಕಾರಿಗಳ ಕೆಲಸವನ್ನು ಇನ್ನಷ್ಟು ಕಠಿಣಗೊಳಿಸಿದೆ.

ದಿಲ್ಲಿಯ ಹಝರತ್ ನಿಝಾಮುದ್ದೀನ್ ಸ್ಟೇಷನ್ ಮತ್ತು ನ್ಯೂಡೆಲ್ಲಿ ರೈಲ್ವೇ ಸ್ಟೇಷನ್‌ಗಳು ದೇಶದ ಅತ್ಯಂತ ಜನನಿಬಿಡ ರೈಲ್ವೇ ನಿಲ್ದಾಣಗಳಾಗಿದ್ದು ಹಝರತ್ ನಿಝಾಮುದ್ದೀನ್ ಸ್ಟೇಷನ್‌ನಲ್ಲಿ ಪ್ರತೀ ದಿನ ಸುಮಾರು 2 ಲಕ್ಷ ಪ್ರಯಾಣಿಕರು ಮತ್ತು ನ್ಯೂಡೆಲ್ಲಿ ರೈಲ್ವೇ ಸ್ಟೇಷನ್‌ನಲ್ಲಿ ಸುಮಾರು 5 ಲಕ್ಷ ಪ್ರಯಾಣಿಕರು ಸೇರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News