ಕೊರೋನ ಲಾಕ್ ಡೌನ್: ಮುಂಜಾಗ್ರತಾ ಕ್ರಮ ಕೈಗೊಳ್ಳಲು ರಾಜ್ಯ ಮತ್ತು ಕೇಂದ್ರ ಸರ್ಕಾರ ವಿಫಲ: ಎಸ್.ಡಿ.ಪಿ.ಐ

Update: 2020-04-01 17:58 GMT

ಮಂಗಳೂರು: ಕೊರೋನ ವೈರಸ್ ಹಾವಳಿಯಿಂದ ಸಾಮಾಜಿಕ ಅಂತರ ಕಾಪಾಡಲು ಕೇಂದ್ರ ಸರ್ಕಾರ ಇಡೀ ದೇಶಾದ್ಯಂತ ಲಾಕ್ ಡೌನ್ ಹೇರಿಕೆ ಮಾಡಿದ್ದು ಸ್ವಾಗತಾರ್ಹ ಕ್ರಮವಾಗಿದ್ದರೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೇ ಇರುವುದರಿಂದ ಲಾಕ್ ಡೌನ್ ಕ್ರಮ ವಿಫಲವಾಗುವ ಸಂಭವವಿದೆ. ವಲಸೆ ಕಾರ್ಮಿಕರು ಹಾಗೂ ವಾಸಿಸಲು ಸ್ವಂತ ಮನೆಗಳು ಇಲ್ಲದೇ ಬಸ್,ರೈಲ್ವೆ ನಿಲ್ದಾಣಗಳಲ್ಲಿ ,ಹಾಗೂ ಬೀದಿಬದಿಗಳಲ್ಲಿ ವಾಸಿಸುವ ನಿರಾಶ್ರಿತರು  ಅತೀ ಹೆಚ್ಚಿನ ಸಂಖ್ಯೆಯಲ್ಲಿ ಈ ದೇಶದಲ್ಲಿ ಇದ್ದಾರೆ.ಏಕಾಏಕಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೇ ಲಾಕ್ ಡೌನ್ ಹೇರಿದ್ದರಿಂದ ಇವರ ಬದುಕು ಅತಂತ್ರವಾಗಿದೆ‌. ಅನಿವಾರ್ಯವಾಗಿ ತಮ್ಮ ತಮ್ಮ ಊರಿಗೆ ನಡೆದುಕೊಂಡೇ ಹೋಗುವ ಪರಿಸ್ಥಿತಿ ಬಂದೊದಗಿದೆ‌ ಎಂದು ಎಸ್.ಡಿ.ಪಿ.ಐ ತಿಳಿಸದೆ.

ಕೊಪ್ಪದ ಹದಿನೇಳು ಮಂದಿ ವಲಸೆ ಕಾರ್ಮಿಕರು ಬಂಟ್ವಾಳದ ತಲಪಾಡಿಗೆ ಕೂಲಿ ಕೆಲಸಕ್ಕೆ ಬಂದು ಲಾಕ್ ಡೌನ್ ನಿಂದ ಅತಂತ್ರರಾಗಿದ್ದಾರೆ. ಇದರ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಈವರೆಗೆ ಯಾವುದೇ ಸ್ಪಂದನೆ ದೊರೆತಿಲ್ಲ. ಹಾಗೆಯೇ ಕೇಂದ್ರ ಸರ್ಕಾರ ,ರಾಜ್ಯ ಸರ್ಕಾರ ಮತ್ತು ದ.ಕ ಜಿಲ್ಲಾಡಳಿತದ ಒಳಗೆ ಜಿಲ್ಲಾಧಿಕಾರಿ, ಕಮಿಷನರ್ ಹಾಗೂ ಸಂಸದರ ವಿಭಿನ್ನವಾದ ಹೇಳಿಕೆಗಳಿಂದ ಜನರು ಗೊಂದಲಕ್ಕೆ ಒಳಗಾಗುತ್ತಿದ್ದಾರೆ. ದಿನಬಳಕೆಯ ಸಾಮಾಗ್ರಿಗಳು ಕೂಡ ಸರಿಯಾದ ರೀತಿಯಲ್ಲಿ ದೊರಕುತ್ತಿಲ್ಲ. ಮೂರು ದಿನ ಸಂಪೂರ್ಣ ಬಂದ್ ಮಾಡಿ, ನಾಲ್ಕನೇ ದಿನ ಕೆಲವು ಗಂಟೆಗಳವರೆಗೆ ಅಂಗಡಿಗಳು ತೆರೆಯುವಂತೆ ಅವೈಜ್ಞಾನಿಕವಾದ ಆದೇಶ ನೀಡಿದರೆ ಜನಜಂಗುಳಿ ಆಗುವುದರಲ್ಲಿ ಯಾವುದೇ ಆಶ್ಚರ್ಯ ಪಡಬೇಕಾಗಿಲ್ಲ,ಅದಕ್ಕೆ ಬದಲಾಗಿ ಪ್ರತಿ ದಿನ ಎರಡು ಮೂರು ಗಂಟೆಗಳ ಕಾಲ ಅಂಗಡಿ ಬಾಗಿಲು ತೆರೆಯಲು ಅವಕಾಶ ನೀಡಿದರೆ ಇಂತಹ ಸಮಸ್ಯೆಗಳು ತಲೆದೂರುವುದಿಲ್ಲ. ‌ಸಮಸ್ಯೆಗಳ ಬಗ್ಗೆ ದ.ಕ ಜಿಲ್ಲಾಡಳಿತ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕೆಂದು ಎಸ್.ಡಿ.ಪಿ.ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಾಹುಲ್ ಎಸ್ ಎಚ್ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News