ದ.ಕ.: ಜನರಿಂದ ನಿರಾಳತೆಯ ಖರೀದಿ

Update: 2020-04-02 08:54 GMT

ಮಂಗಳೂರು, ಎ.2: ದ.ಕ. ಜಿಲ್ಲಾಡಳಿತವು ಇಂದು ಕೂಡಾ ಸಾರ್ವಜನಿಕರಿಗೆ ತರಕಾರಿ, ಹಣ್ಣು ಹಂಪಲು ಸೇರಿದಂತೆ ದಿನಸಿ ಖರೀದಿಗೆ ಬೆಳಗ್ಗೆ 7ರಿಂದ ಮಧ್ಯಾಹ್ನ 12ರವರೆಗೆ ಅವಕಾಶ ಕಲ್ಪಿಸಿದ್ದರಿಂದ ಜನರು ನಿರಾಳರಾಗಿ, ಹೆಚ್ಚಿನ ಕಡೆ ಕ್ಯೂ ಇಲ್ಲದೆಯೇ ಆರಾಮವಾಗಿ ಖರೀದಿ ನಡೆಸಿದರು. ಮೀನು ಮಾಂಸ ಮಾರುಕಟ್ಟೆ, ಸೂಪರ್ ಬಜಾರ್, ಅಂಗಡಿಗಳಲ್ಲಿ ಜನರು ಆರಾಮವಾಗಿ ಆಹಾರ ವಸ್ತುಗಳನ್ನು ಖರೀದಿಸಿದರು.

ಕೆಲವೊಂದು ಅಂಗಡಿಗಳಲ್ಲಿ ಸರತಿ ಕಂಡುಬಂದರೂ ಜನರು ಸಾಮಾಜಿಕ ಅಂತರವನ್ನು ಕಾಯ್ದುಕೊಂಡಿದ್ದರು. ಇದೇ ವೇಳೆ ಸೆಂಟ್ರಲ್ ಮಾರುಕಟ್ಟೆ ಆವರಣದ ಹೊರಗಡೆ ಅನೇಕ ಕಡೆ ರಸ್ತೆಗಳಲ್ಲಿ ಮುಕ್ತ ವಾತಾವರಣದಲ್ಲಿ ಚಿಲ್ಲರೆ ವ್ಯಾಪಾಸ್ಥರು ತರಕಾರಿ, ಹಣ್ಣುಹಂಪಲು ಮಾರಾಟ ನಡೆಸಿದರು. ಜನರು ಕೂಡಾ ಯಾವುದೇ ಆತಂಕವಿಲ್ಲದೆ, ಮುಗಿ ಬೀಳದೆ ಸಾವಧಾನದಿಂದ ವಸ್ತುಗಳನ್ನು ಖರೀದಿಸಿದರು. ಕೋವಿಡ್ ಸಂಬಂಧ ಪಾಲಿಕೆಯಿಂದ ನಿಗಾ ವಹಿಸಲು ನಿಯೋಜಿಸಲಾಗಿರುವ ಹಿರಿಯ ಅಧಿಕಾರಿಗಳು, ಸಿಬ್ಬಂದಿ ನಗರದ ಮಾರುಕಟ್ಟೆ, ವ್ಯಾಪಾರ ಸ್ಥಳಗಳಲ್ಲಿ ಜನರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಜಾಗೃತಿಯ ಜತೆಗೆ ವ್ಯಾಪಾರಸ್ಥರಿಗೂ ಮುಂಜಾಗೃತಾ ಕ್ರಮಗಳ ಬಗ್ಗೆ ಮಾಹಿತಿಯನ್ನು ಒದಗಿಸಿದರು.

ಮೆಡಿಕಲ್‌ಗಳಲ್ಲಿ ತಪ್ಪದ ಕ್ಯೂ

ನಗರದ ಪ್ರಮುಖ ಮೆಡಿಕಲ್‌ಗಳಲ್ಲಿ ಇಂದು ಕೂಡಾ ಬೆಳಗ್ಗಿನ ಹೊತ್ತು ಜನರು ಕ್ಯೂನಲ್ಲಿ (ಸಾಮಾಜಿಕ ಅಂತರ ಕಾಯ್ದುಕೊಂಡು) ಔಷಧಿ ಖರೀದಿಸಿದರು. ಕೆಲ ಮೆಡಿಕಲ್‌ಗಳಲ್ಲಿ ಮೀಟರ್‌ಗಟ್ಟಲೆ ಕ್ಯೂ ಕೂಡಾ ಕಂಡುಬಂತು.

ಸ್ತಬ್ಧವಾದ ಸೆಂಟ್ರಲ್ ಮಾರುಕಟ್ಟೆ

ಇಂದು ಬೆಳಗ್ಗೆ ಸೆಂಟ್ರಲ್ ಮಾರುಕಟ್ಟೆ ಸಂಪೂರ್ಣ ಸ್ತಬ್ಧವಾಗಿದ್ದು, ಮಾರುಕಟ್ಟೆ ಪ್ರವೇಶಿಸುವ ಎಲ್ಲಾ ಪ್ರವೇಶ ಮಾರ್ಗಗಳನ್ನು ಬಂದ್ ಮಾಡಲಾಗಿತ್ತು. ಮಾತ್ರವಲ್ಲದೆ ಪೊಲೀಸರು ಬಿಗಿ ಪಹರೆಯನ್ನು ಒದಗಿಸಿದ್ದಾರೆ. ಕಳೆದ ಎರಡು ದಿನಗಳಿಂದ ಸೆಂಟ್ರಲ್ ಮಾರುಕಟ್ಟೆಯಲ್ಲಿ ರಾತ್ರಿ 11ರಿಂದ 4ರವರೆಗೆ ಹೋಲ್‌ಸೇಲ್ ವ್ಯಾಪಾರಸ್ಥರಿಗೆ ಅವಕಾಶ ನೀಡಲಾಗಿತ್ತು. ನಿನ್ನೆ ರಾತ್ರಿ ವ್ಯಾಪಾರಸ್ಥರು ಭಾರೀ ಸಂಖ್ಯೆಯಲ್ಲಿ ಸೇರಿದ್ದರು. ಇದೀಗ ಅಲ್ಲಿನ ವ್ಯವಸ್ಥೆಯನ್ನು ತಪ್ಪಿಸುವ ಸಲುವಾಗಿ ಹೋಲ್‌ಸೇಲ್ ಮಾರಾಟವನ್ನು ಕೂಡಾ ಸೆಂಟ್ರಲ್ ಮಾರುಕಟ್ಟೆಯಲ್ಲಿ ನಿಲ್ಲಿಸುವ ಚಿಂತನೆಯನ್ನು ಜಿಲ್ಲಾಡಳಿತ ನಡೆಸುತ್ತಿದ್ದು, ಹಾಪ್‌ಕಾಮ್ಸ್ ಮೂಲಕ ಹೋಲ್‌ಸೇಲ್ ಮಾರಾಟಕ್ಕೆ ಚಿಂತನೆ ನಡೆಯುತ್ತಿದೆ ಎಂದು ಪಾಲಿಕೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ 

ನ್ಯಾಯ ಬೆಲೆ ಅಂಗಡಿಗಳಲ್ಲಿ ಕ್ಯೂ
ಸರಕಾರವು ಎರಡು ತಿಂಗಳ ಪಡಿತರವನ್ನು ನೀಡಲು ನಿರ್ಧರಿಸಿರುವುದರಿಂದ ನಗರದ ಬಹುತೇಕ ನ್ಯಾಯಬೆಲೆ ಅಂಗಡಿಗಳಲ್ಲಿ ಜನರು ಕ್ಯೂನಲ್ಲಿ ನಿಂತಿರುವುದು ಇಂದು ಕಂಡು ಬಂತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News