ಔಷಧಿ, ದಿನಸಿಗೆ ಕೊರತೆಯಾಗದಂತೆ ಕ್ರಮ: ಶಾಸಕ ವೇದವ್ಯಾಸ ಕಾಮತ್

Update: 2020-04-02 15:31 GMT

ಮಂಗಳೂರು, ಎ. 2: ಅಕ್ಕಿ ಸೇರಿದಂತೆ ದಿನಬಳಕೆಯ ವಸ್ತುಗಳು ಹಾಗೂ ಔಷಧ ಸಾಮಗ್ರಿಗಳು ಜಿಲ್ಲೆಯಲ್ಲಿ ಪೂರೈಕೆಯಲ್ಲಿ ಯಾವುದೇ ರೀತಿಯ ಕೊರತೆಯಾಗದಂತೆ ಕ್ರಮ ವಹಿಸಲಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಟಿಯಲ್ಲಿಂದು ಮಾತನಾಡಿದ ಅವರು, ಸೆಂಟ್ರಲ್ ಮಾರುಕಟ್ಟೆ ಹಾಗೂ ಬಂದರು ಪ್ರದೇಶದ ಎಲ್ಲಾ ಸಗಟು ಉದ್ದಿಮೆದಾರರ ಜತೆ ಮಾತನಾಡಿ ಜಿಲ್ಲೆಯಲ್ಲಿ ಔಷಧಿ ಸೇರಿದಂತೆ ಎಲ್ಲಾ ರೀತಿಯ ಅಗತ್ಯ ವಸ್ತುಗಳ ಪೂರೈೆಗೆ ಕ್ರಮ ವಹಿಸಲಾಗಿದೆ ಎಂದರು.

ಬೆಂಗಳೂರು ಹಾಗೂ ಇತರ ಕಡೆಗಳಿಂದ ವಸ್ತುಗಳು ಸಗಟು ವ್ಯಾಪಾರಿಗಳಿಗೆ ರವಾನೆಯಾಗುತ್ತಿದ್ದು, ಅದನ್ನು ರಿಟೇಲ್ ಅಂಗಡಿಗಳಿಗೆ ಒದಗಿಸುವ ಕಾರ್ಯ ನಡೆಯುತ್ತಿದೆ. ರೈಸ್‌ಮಿಲ್ ಮಾಲಕರ ಜತೆ ಮಾತುಕತೆ ನಡೆಸಿ ಅಗತ್ಯ ಕಾರ್ಮಿಕರನ್ನು ಕರೆಸಿ ಕಾರ್ಯಾರಂಭಿಸುವ ಮೂಲಕ ಜಿಲ್ಲೆಯ ಜನರಿಗೆ ಅಗತ್ಯವಾದ ಕುಚ್ಚಲಕ್ಕಿ ಕೊರತೆಯಾಗದಂತೆ ಕ್ರಮ ವಹಿಸಲಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್ ತಿಳಿಸಿದರು.

ಜಿಲ್ಲೆಯಲ್ಲಿ 9 ಪ್ರಕರಣ ಪಾಸಿಟಿವ್
ದ.ಕ. ಜಿಲ್ಲೆಯಲ್ಲಿ ಒಟ್ಟು 9 ಮಂದಿ ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಎಲ್ಲರೂ ಗುಣಮುಖರಾಗುತ್ತಿದ್ದಾರೆ. ಕ್ವಾರಂಟೈನ್ ಆಗಿರುವ 30 ಮಂದಿಯ ಪರೀಕ್ಷಾ ವರದಿಯನ್ನು ಜಿಲ್ಲಾಡಳಿತ ಎದುರು ನೋಡುತ್ತಿದೆ. ಅವರು ಸದ್ಯ ಇಎಸ್‌ಐ ಆಸ್ಪತ್ರೆಯಲ್ಲಿದ್ದಾರೆ.

ಎಪಿಎಲ್/ಬಿಪಿಎಲ್ ಕಾರ್ಡ್ ಇಲ್ಲದ ವಲಸಿಗರಿಗೆ ಜಿಲ್ಲಾಡಳಿತದಿಂದ ದಿನಸಿ
ನಗರದಲ್ಲಿ ಹೊರ ರಾಜ್ಯ, ಜಿಲ್ಲೆ, ತಾಲೂಕಿನಿಂದ ಕೆಲಸದ ನಿಮಿತ್ತ ಬಂದು ನೆಲೆಸಿರುವ, ಎಪಿಎಲ್ ಅಥವಾ ಬಿಪಿಎಲ್ ಕಾರ್ಡ್ ಹೊಂದಿಲ್ಲದ ಮಂಗಳೂರನ್ನು ಅವಲಂಬಿಸಿದವರಿಗೆ ಜಿಲ್ಲಾಡಳಿತದ ನೇತೃತ್ವದಲ್ಲಿ ಅಕ್ಕಿ ಸೇರಿ (ಬೇಳೆ, ಸೆಕ್ಕರೆ, ಚಾಹುಡಿ, ರವೆ, ಸೋಪು) 8 ದಿನಸಿ ಸಾಮಗ್ರಿಗಳನ್ನು ಅವರಿರುವ ಜಾಗಕ್ಕೆ ತಲುಪಿಸುವ ಕಾರ್ಯ ಇಂದಿನಿಂದ ಆರಂಭಿಸಲಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್ ತಿಳಿಸಿದರು.

ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಈ ರೀತಿಯಾಗಿ ಕಟ್ಟಡ ಮತ್ತು ಇತರ ಕಾಮಗಾರಿಗಳಿಗಾಗಿ ನಗರಕ್ಕೆ ಬಂದಿರುವ 993 ಮಂದಿಯನ್ನು ಗುರುತಿಸಲಾಗಿದೆ. ಮಾರ್ಬಲ್ ಸೇರಿದಂತೆ ಇತರ ಕೂಲಿ ಕೆಲಸಕ್ಕೆ ಬಂದಿರುವ 815 ಮಂದಿಯನ್ನು ಜಿಲ್ಲಾಡಳಿತ ಗುರುತಿಸಿ ರೇಶನ್ ಪೂರೈಕೆ ಮಾಡುತ್ತಿದೆ. ಇದಲ್ಲದೆ ಹಲವಾರು ವರ್ಷಗಳಿಂದ ಇಲ್ಲೇ ನೆಲೆಸಿದ್ದರೂ ಎಪಿಎಲ್/ ಬಿಪಿಎಲ್ ಕಾರ್ಡ್ ಇಲ್ಲದ 2101 ಕುಟುಂಬಗಳ 3900 ಮಂದಿಗೆ ಎರಡು ದಿನಗಳಲ್ಲಿ ರೇಶನ್ ತಲುಪಿಸುವ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಲಿದೆ ಎಂದು ವೇದವ್ಯಾಸ ಕಾಮತ್ ತಿಳಿಸಿದರು.

ಮುಜರಾಯಿ ಇಲಾಖೆಯಿಂದ ಕದ್ರಿ ದೇವಸ್ಥಾನದಿಂದ ಭಿಕ್ಷುಕರು ಸೇರಿದಂತೆ ಇತರ ರಾಜ್ಯ ಜಿಲ್ಲೆಗಳ 2475 ಮಂದಿ ನಿರಾಶ್ರಿತರಿಗೆ ಕಳೆದ ಮೂರು ದಿನಗಳಿಂದ ಮಧ್ಯಾಹ್ನ ಹಾಗೂ ರಾತ್ರಿ ಊಟದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.

ಸರಕಾರಿ ಶಾಲೆ, ಹಾಸ್ಟೆಲ್‌ಗಳಲ್ಲಿ ತಂಗಿರುವ ಸುಮಾರು 700 ಮಂದಿಗೆ ಅವರಲ್ಲಿಗೆಯೇ ಊಟ ಒದಗಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಇದಲ್ಲದೆ ಹೊಟೇಲ್, ಮೆಸ್‌ನ ವ್ಯವಸ್ಥೆ ಇಲ್ಲದ 413 ಮಂದಿಗೆ ಇಂದಿರಾ ಕ್ಯಾಂಟೀನ್‌ನಿಂದ ಊಟದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.

ಪ್ರತಿ ವಾರ್ಡ್‌ಗೆ 50ರಂತೆ 'ಮೋದಿ ಕಿಟ್'!
ಸಂಸದರು, ಮೇಯರ್ ನೇತೃತ್ವದಲ್ಲಿ ಪ್ರಮುಖ ಕಾರ್ಯಕರ್ತರ ಸಹಕಾರದೊಂದಿಗೆ ವಾರ್ಡ್‌ಗಳಿಗೆ ತಲಾ 50ರಂತೆ ತಮ್ಮ ವ್ಯಾಪ್ತಿಯ 38 ವಾರ್ಡ್‌ಗಳಿಗೆ ‘ಮೋದಿ ಕಿಟ್’ ವಿತರಿಸುವ ಕಾರ್ಯ ಆರಂಭಿಸಲಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್ ತಿಳಿಸಿದರು.

ಈ ಕಿಟ್‌ನಲ್ಲಿ 5 ಕೆಜಿ ಕುಚ್ಚಲಕ್ಕಿ, ತಲಾ ಒಂದು ಕೆಜಿ ಸಕ್ಕರೆ, ರವೆ, ಎಣ್ಣೆ, ಅರ್ಧಕೆಜಿ ಬೇಳೆ, ಪೇಸ್ಟ್, ಸೋಪ್ ಹಾಗೂ ಲಭ್ಯವಿರುವ ಧಾನ್ಯದ ತಲಾ 500 ರೂ. ಬೆಲೆಬಾಳುವ ಕಿಟ್ ಇದಾಗಿದೆ. ಅಗತ್ಯಕ್ಕನುಸಾರವಾಗಿ 10,000 ಕಿಟ್‌ಗಳನ್ನು ತಯಾರು ಮಾಡಲು ಕ್ರಮ ವಹಿಸಲಾಗಿದೆ.
ಸರಕಾರದಿಂದ ಬಿಪಿಎಲ್ ಕಾರ್ಡುದಾರರಿಗೆ ಮಂಗಳೂರು ಮತ್ತು ಉಳ್ಳಾಲದಲ್ಲಿ 32,141 ಮಂದಿಗೆ (ಸದಸ್ಯನಿಗೆ ತಲಾ 10 ಕೆಜಿಯಂತೆ) ಎರಡು ತಿಂಗಳ ಅಕ್ಕಿ ವಿತರಣೆ ಕಾರ್ಯ ಆರಂಭಿಸಲಾಗಿದೆ. ಅಂತ್ಯೋದಯದಡಿ 1268 ಕಾರ್ಡುದಾರರಿಗೆ ಎಪಿಎಲ್‌ನಡಿ 3058 (ಏಕವ್ಯಕ್ತಿ) ಕಾರ್ಡುದಾರರಿಗೆ ಕೆಜಿಗೆ ರೂ.15ರಂತೆ ಅಕ್ಕಿ ಪೂರೈಕೆ ಆರಂಭವಾಗಿದೆ. 2ಕ್ಕಿಂತ ಹೆಚ್ಚಿನ ಸದಸ್ಯರಿರುವ ಎಪಿಎಲ್‌ನ 28055 ಕಾರ್ಡುದಾರರಿಗೆ ಅಕ್ಕಿ ಪೂರೈಸುವ ಕಾರ್ಯ ಆರಂಭಗೊಂಡಿದೆ. ಗೋಧಿ ಸರಬರಾಜು ಶೀಘ್ರವೇ ಆಗಲಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಮಾಹಿತಿ ನೀಡಿದರು.

ಮಂಗಳೂರು ನಗರ ಪ್ರದೇಶದಲ್ಲಿ ಆಹಾರ ಸಾಮಗ್ರಿ ಪೂರೈಕೆ ಮಾಡಲು ಸಾಮರ್ಥ್ಯವಿರುವ ಅಂಗಡಿಗಳನ್ನು ಗುರುತಿಸಿ ನಾಳೆ ಸಂಪೂರ್ಣ ಮಾಹಿತಿ ನೀಡಲಾಗುವುದು ಎಂದು ಅವರು ಹೇಳಿದರು.

ಗೋಷ್ಠಿಯಲ್ಲಿ ಮೇಯರ್ ದಿವಾಕರ ಪಾಂಡೇಶ್ವರ, ಉಪ ಮೇಯರ್ ವೇದಾವತಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಜಗದೀಶ್ ಶೆಟ್ಟಿ, ಕಿರಣ್ ಕುಮಾರ್ ಉಪಸ್ಥಿತರಿದ್ದರು.

ಖರೀದಿಗೆ ಬೆಳಗ್ಗೆ 7ರಿಂದ ಮಧ್ಯಾಹ್ನ 12 ಗಂಟೆವರೆಗೆ ಅವಕಾಶ
ದಿನಸಿ ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳು ಸಾರ್ವಜನಿಕರಿಗೆ ಸ್ಥಳೀಯವಾಗಿಯೇ ಸಿಗುವ ವ್ಯವಸ್ಥೆ ಮಾಡಲಾಗುತ್ತಿದೆ. ಸಾರ್ವಜನಿಕರು ಜಿಲ್ಲಾಡಳಿತ ತಿಳಿಸಿರುವ ಅವಧಿಯಲ್ಲಿಯೇ ಬೆಳಗ್ಗೆ (7ರಿಂದ ಮಧ್ಯಾಹ್ನ 12 ಗಂಟೆ) ಸಮೀಪದ ಅಂಗಡಿ, ಮಾರುಕಟ್ಟೆಗಳಿಂದ ಅಗತ್ಯ ವಸ್ತುಗಳನ್ನು ನಡೆದುಕೊಂಡೇ ಖರೀದಿಸಬೇಕು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News