ಕಾಸರಗೋಡು: 2 ವರ್ಷದ ಮಗು ಸಹಿತ 8 ಮಂದಿಗೆ ಸೋಂಕು
ಕಾಸರಗೋಡು, ಎ.2: ಜಿಲ್ಲೆಯಲ್ಲಿ ಕೊರೋನ ವೈರಸ್ ಸೋಂಕು ಹರಡುತ್ತಲೆ ಇದ್ದು, ಗುರುವಾರ ಎರಡು ವರ್ಷದ ಮಗು ಸೇರಿದಂತೆ ಎಂಟು ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಇದರಿಂದ ಸೋಂಕಿತರ ಒಟ್ಟು ಸಂಖ್ಯೆ 128ಕ್ಕೇರಿದೆ.
ಜಿಲ್ಲೆಯಲ್ಲಿ ಸೋಂಕು ಪೀಡಿತರಲ್ಲಿ 33 ವರ್ಷದ ಪುರುಷ, 28ರ ಮಹಿಳೆ, ಎರಡು ವರ್ಷದ ಮಗು ಸೇರಿದ್ದು, ಇವರು ನಾಲ್ವರು ನಗರಸಭಾ ವ್ಯಾಪ್ತಿಯವರಾಗಿದ್ದಾರೆ. ಮೊಗ್ರಾಲ್ ಪುತ್ತೂರು ನಿವಾಸಿಗಳಾದ 26 ವರ್ಷದ ಇಬ್ಬರಲ್ಲಿ ಸೋಂಕು ದೃಢಪಟ್ಟಿದೆ. 41 ವರ್ಷದ ಉದುಮ ಮತ್ತು 34 ವರ್ಷದ ಮಧೂರು ನಿವಾಸಿಯಾದ ಮಹಿಳೆಯಲ್ಲಿ ಸೋಂಕು ಖಚಿತವಾಗಿದ್ದು, ನಾಲ್ವರು ವಿದೇಶದಿಂದ ಬಂದವರಾಗಿದ್ದರೆ, ಇತರ ನಾಲ್ವರಿಗೆ ಸಂಪರ್ಕದಿಂದ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿ 10,240 ಮಂದಿ ನಿಗಾದಲ್ಲಿದ್ದಾರೆ. ಈ ಪೈಕಿ 177 ಮಂದಿ ಆಸ್ಪತ್ರೆಯ ಐಸೋಲೇಶನ್ ವಾರ್ಡ್‌ನಲ್ಲಿದ್ದಾರೆ. ಇದುವರೆಗೆ 1214 ಮಂದಿಯ ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಪೈಕಿ 732 ಮಂದಿಯ ವರದಿ ನೆಗೆಟಿವ್ ಆಗಿದೆ. ಇನ್ನೂ 362 ಮಂದಿಯ ವೈದ್ಯಕೀಯ ಪರೀಕ್ಷಾ ವರದಿ ಲಭಿಸಬೇಕಿದೆ. ಇಂದು ಮತ್ತೆ 21 ಮಂದಿಯನ್ನು ಐಸೋಲೇಶನ್ ವಾರ್ಡ್‌ಗೆ ದಾಖಲಿಸಲಾಗಿದೆ.
ಕೇರಳದಲ್ಲಿ 21 ಪಾಸಿಟಿವ್ ಪ್ರಕರಣ
ರಾಜ್ಯದಲ್ಲಿ ಗುರುವಾರ 21 ಕೊರೋನ ಪ್ರಕರಣ ಪತ್ತೆಯಾಗಿದ್ದು, ಕಾಸರಗೋಡು ಎಂಟು, ಇಡುಕ್ಕಿ ಐದು, ಕೊಲ್ಲಂ ಎರಡು, ತಿರುವನಂತಪುರ, ಪತ್ತನಂತ್ತಿಟ್ಟ, ತ್ರಿಶೂರು, ಮಲಪ್ಪುರಂ, ಕೋಝಿಕ್ಕೋಡ್, ಕಣ್ಣೂರು ಮತ್ತಿತರೆಡೆ ತಲಾ ಒಂದು ಪ್ರಕರಣ ದೃಢಪಟ್ಟಿದೆ. ಇದರೊಂದಿಗೆ ಒಟ್ಟು ಸಂಖ್ಯೆ 286ಕ್ಕೇರಿದೆ. ಈ ಪೈಕಿ 256 ಮಂದಿ ಚಿಕಿತ್ಸೆ ಪಡೆಯುತ್ತಿದ್ದರೆ, 30 ಮಂದಿ ಗುಣಮುಖರಾಗಿದ್ದಾರೆ.
ಪತ್ರಕರ್ತರಿಗೂ ಸೋಂಕು?
ಕಾಸರಗೋಡು ಜಿಲ್ಲೆಯ ಕೆಲ ಪತ್ರಕರ್ತರಿಗೆ ಕೊರೋನ ಸೋಂಕು ಶಂಕೆ ಉಂಟಾಗಿದ್ದು, ಇದರಿಂದ ಪತ್ರಕರ್ತರು ಆತಂಕಕ್ಕೆ ಒಳಗಾಗಿದ್ದಾರೆ. ಇಬ್ಬರು ಪತ್ರಕರ್ತರ ಸಂಬಂಧಿಕರಲ್ಲಿ ಸೋಂಕು ದೃಢಪಟ್ಟಿದ್ದು, ಇದರಿಂದ ಇಬ್ಬರು ಪತ್ರಕರ್ತರು, ಇವರ ಜೊತೆ ಸಂಪರ್ಕ ಹೊಂದಿರುವ ಇತರ ಪತ್ರಕರ್ತರು ನಿಗಾ ವಹಿಸುವುದರ ಜೊತೆಗೆ ಆರೋಗ್ಯ ತಪಾಸಣೆಗೆ ಒಳಗಾಗುವಂತೆ ಜಿಲ್ಲಾ ಆರೋಗ್ಯ ಇಲಾಖೆ ಸೂಚಿಸಿದೆ.