×
Ad

ಶುಕ್ರವಾರ 'ಜುಮಾ' ಬದಲು ಮನೆಯಲ್ಲೇ 'ಲುಹರ್' ನಮಾಝ್‌

Update: 2020-04-02 19:10 IST

ಮಂಗಳೂರು, ಎ.2: ಕೊರೋನ ವೈರಸ್ ತಡೆಗಟ್ಟುವುದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರಕಾರ ನಡೆಸುತ್ತಿರುವ ಮುಂಜಾಗ್ರತಾ ಕ್ರಮಕ್ಕೆ ಪೂರಕವಾಗಿ ಮತ್ತು ದೇಶ ಹಾಗೂ ಸಮಾಜದ ಹಿತದೃಷ್ಟಿಯಿಂದ ದಿನದ ಐದು ಬಾರಿಯ ನಮಾಝ್ ಅಲ್ಲದೆ ಶುಕ್ರವಾರದ ಜುಮಾ ನಮಾಝ್‌ನ ಬದಲು ಮನೆಯಲ್ಲೇ 'ಲುಹರ್' ನಮಾಝ್ ನಿರ್ವಹಿಸುವುದು ಅನಿವಾರ್ಯವಾಗಿದೆ. ಮಾ.27ರ ಶುಕ್ರವಾರ ಮಸೀದಿಯಲ್ಲಿ ಇಮಾಮ್/ಮುಅದ್ಸಿನ್ ಹೊರತುಪಡಿಸಿ ಬೇರೆ ಯಾರೂ ನಮಾಝ್ ಮಾಡಿರಲಿಲ್ಲ. ಎಲ್ಲರೂ ತಮ್ಮ ತಮ್ಮ ಮನೆಯಲ್ಲೇ ಲುಹರ್ ನಮಾಝ್ ಮಾಡಿದ್ದರು. ಇದೀಗ ಎ.3ರಂದು ಕೂಡ ಮಸೀದಿಯ ಬದಲು ಮನೆಯಲ್ಲೇ ನಮಾಝ್ ಮಾಡಲು ನಿರ್ದೇಶಿಸಲಾಗಿದೆ.

ಜನಸಂದಣಿಯಿರುವ ಕಡೆ ರೋಗ ಹರಡುವ ಸಾಧ್ಯತೆ ಇದೆ ಎಂದು ವೈದ್ಯರು ಅಭಿಪ್ರಾಯಪಟ್ಟಿರುವ ಹಿನ್ನೆಲೆಯಲ್ಲಿ ಮತ್ತು ಆಡಳಿತ ವ್ಯವಸ್ಥೆ ಕೂಡ ಮಸೀದಿಗಳಲ್ಲೂ ಜನರು ಸೇರದಂತೆ ಸೂಚಿಸಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಇದನ್ನು ಎಲ್ಲರೂ ಪಾಲಿಸುವ ಅಗತ್ಯವಿದೆ. ಹಾಗಾಗಿ ಮಸೀದಿಯಲ್ಲಿ ಶುಕ್ರವಾರದ ಜುಮಾ ನಮಾಝ್‌ನ ಬದಲು ತಮ್ಮ ಮನೆಗಳಲ್ಲೇ ಲುಹರ್ ನಮಾಝ್ ನಿರ್ವಹಿಸಲು ಕೋರಲಾಗಿದೆ. ಈ ಬಗ್ಗೆ ಖಾಝಿಗಳೂ ಸೂಚನೆ ನೀಡಿದ್ದಾರೆ. 

ಸಂದೇಶ ಬಿತ್ತರಿಸಲು ಸೂಚನೆ

ಕೊರೋನ ವೈರಸ್ ತಡೆಗಟ್ಟುವ ಸಲುವಾಗಿ ರಾಜ್ಯ ಸರಕಾರ ಮತ್ತು ಅಮೀರ್ ಎ ಷರಿಯತ್‌ನ ನಿರ್ದೇಶನದಂತೆ ಕನ್ನಡ ಸಹಿತ ವಿವಿಧ ಭಾಷೆಗಳಲ್ಲಿ ರಚಿಸಲಾದ ಆಡಿಯೋ ಸಂದೇಶವನ್ನು ರಾಜ್ಯ ವಕ್ಫ್ ಮಂಡಳಿಯು ಬಿಡುಗಡೆ ಮಾಡಿದೆ. ಅಲ್ಲದೆ ಈ ಆಡಿಯೋ ಕ್ಲಿಪ್ಪನ್ನು ಎಲ್ಲಾ ಮಸೀದಿಗಳ ಧ್ವನಿವರ್ಧಕಗಳಲ್ಲಿ ಪ್ರತೀ ದಿನ ಬೆಳಗ್ಗೆ 10ಕ್ಕೆ, ಸಂಜೆ 4ಕ್ಕೆ, ಮುಸ್ಸಂಜೆ 6ಕ್ಕೆ, ರಾತ್ರಿ 8 ಗಂಟೆಗೆ ಪ್ರಸಾರ ಮಾಡಲು ವಕ್ಫ್ ಮಂಡಳಿಯ ಕಾರ್ಯನಿರ್ವಾಹಕ ಅಧಿಕಾರಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News