ಜಿಲ್ಲೆಯಲ್ಲಿ ಮೀನು, ಮಾಂಸ ನಿರ್ಬಂಧಿಸಿಲ್ಲ: ಉಡುಪಿ ಜಿಲ್ಲಾಧಿಕಾರಿ ಜಗದೀಶ್
ಉಡುಪಿ, ಎ.2: ಜಿಲ್ಲೆಯಲ್ಲಿ ಮೀನು, ಕೋಳಿ, ಮಟನ್ ವ್ಯಾಪಾರಕ್ಕೆ ಯಾವುದೇ ನಿರ್ಬಂಧ ವಿಧಿಸಿಲ್ಲ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಸ್ಪಷ್ಟಪಡಿಸಿದ್ದಾರೆ.
ಗುರುವಾರ ಉಡುಪಿ ಪ್ರೆಸ್ ಕ್ಲಬ್‌ನಲ್ಲಿ ಅವರು ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು. ಮೀನುಗಾರಿಕೆ, ಮೀನು ಹಿಡಿಯಲು ಹಾಗೂ ಮಾರಾಟ ಮಾಡಲು ಯಾವುದೇ ನಿಷೇಧ ವಿಧಿಸಿಲ್ಲ. ಆದರೆ ಗುಂಪು ಗುಂಪಾಗಿ ಮೀನುಗಾರಿಕೆ ಮಾಡುವುದಕ್ಕೆ ಹಾಗೂ ಮಾರಾಟ ಮಾಡುವುದಕ್ಕೆ ನಿರ್ಬಂಧವಿದೆ. ಮೀನು ಹಿಡಿಯುವಾಗ ಹಾಗೂ ಮಾರಾಟ ಮಾಡುವಾಗ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂದರು.
ನಾಡದೋಣಿಗಳು, ಸಾಂಪ್ರದಾಯಿಕ ದೋಣಿಗಳಲ್ಲಿ ಮೀನುಗಾರಿಕೆ ಮಾಡಲು ಮತ್ತು ಸಾಮಾಜಿಕ ಅಂತರ ಕಾಯ್ದುಕೊಂಡು ಮೀನು, ಕೋಳಿ, ಮಾಂಸ ಮಾರಾಟ ಮಾಡಬಹುದು ಎಂದು ಜಿಲ್ಲಾಧಿಕಾರಿ ಸ್ಪಷ್ಠಪಡಿಸಿದರು.
ಜಿಲ್ಲೆಯ ರೈತರ ಬೆಳಗಳಿಗೆ ಸಹ ಯಾವುದೇ ತೊಂದರೆಯಾಗದಂತೆ ಸಮರ್ಪಕ ರೀತಿಯಲ್ಲಿ ಸಾಗಾಟ ಮತ್ತು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ, ಎಪಿಎಂಸಿ ಮತ್ತು ತೋಟಗಾರಿಕಾ ಇಲಾಖೆಯ ಮೂಲಕ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ರೈತರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ, ಆಹಾರ ಸಾಮಗ್ರಿಗಳ ಕೊರತೆಯಾಗದಂತೆ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.
ಜಿಲ್ಲೆಯಲ್ಲಿ ಪಡಿತರ ವಿತರಣೆಯೂ ಸಮರ್ಪಕ ರೀತಿಯಲ್ಲಿ ನಡೆಯುತ್ತಿದ್ದು ಯಾವುದೇ ಗೊಂದಲಗಳಿಗೆ ಆಸ್ಪದ ನೀಡದ ರೀತಿಯಲ್ಲಿ ಪಡಿತರಗಳನ್ನು ತರಿಸಲಾಗುತ್ತಿದೆ. ಹಾಗೆಯೇ ಪಡಿತರ ದಾಸ್ತಾನಿಗೂ ಕೊರತೆಯಿಲ್ಲ ಎಂದು ಜಿ.ಜಗದೀಶ್ ತಿಳಿಸಿದರು.
ಎಂಟು ಮಂದಿ ವಿರುದ್ಧ ಕ್ರಮ: ಹೋಮ್ ಕ್ವಾರಂಟೈನ್ ಉಲ್ಲಂಘಿಸಿ ಸುತ್ತಾಡುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುತ್ತಿದೆ. ಇದುವರೆಗೆ ಹೋಮ್ ಕ್ವಾರಂಟೈನ್ ಉಲ್ಲಂಘಿಸಿದ ಎಂಟು ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ. ಇತರರಿಗೆ ತೊಂದರೆ ಕೊಟ್ಟರೆ ಚಿಕಿತ್ಸೆಯ ಪೂರ್ತಿ ವೆಚ್ಚವನ್ನು ಅವರಿಂದಲೇ ಭರಿಸುತ್ತೇವೆ ಎಂದು ಜಿಲ್ಲಾಧಿಕಾರಿ ಹೋಮ್ ಕ್ವಾರಂಟೈನ್ ನಲ್ಲಿರುವವರಿಗೆ ಖಡಕ್ ಎಚ್ಚರಿಕೆ ನೀಡಿದರು.
ಜಿಲ್ಲೆಯಲ್ಲಿ ಜಿಲ್ಲಾಡಳಿತದ ವತಿಯಿಂದ ಕ್ವಾರಟೈಂನ್ ಮಾಡಿರುವವರ ಊಟ ಮತ್ತು ವಸತಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ಜಿಲ್ಲಾಡಳಿತವೇ ನೋಡಿಕೊಳ್ಳುತ್ತಿದೆ. ಅವರಿಗೆ ಪೌಷ್ಠಿಕ ಆಹಾರ ಮತ್ತು ಹಣ್ಣುಗಳನ್ನು ಒದಗಿಸಲಾಗುತ್ತಿದೆ. ಜಿಲ್ಲೆಯಲ್ಲಿ ಇನ್ನು 4 ದಿನದಲ್ಲಿ ಪ್ರಸ್ತುತ ಕ್ವಾರಟೈಂನ್‌ನಲ್ಲಿರುವರ ಅವಧಿ ಮುಗಿಯಲಿದೆ. ನಂತರ 14 ದಿನ ಅವರ ಬಗ್ಗೆ ನಿಗಾ ವಹಿಸಲಾಗುವುದು ಎಂದರು.
ಹೋಮ್ ಕ್ವಾರಂಟೈನ್ ನಿಯಮ ಉಲ್ಲಂಸುವವರ ವಿರುದ್ದ 2 ವರ್ಷಗಳ ಜೈಲು ವಾಸದ ಶಿಕ್ಷೆ ವಿಧಿಸಬಹುದಾಗಿದ್ದು, ಅವರಿಂದ ತೊಂದರೆಗೊಳಗಾದ ನಾಗರಿಕರ ಚಿಕಿತ್ಸಾ ವೆಚ್ಚವನ್ನು ಕ್ವಾರಂಟೈನ್ ಉಲ್ಲಂಸಿದ ವ್ಯಕ್ತಿಯಿಂದಲೇ ವಸೂಲಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
9 ಮಂದಿ ಆಸ್ಪತ್ರೆ ಕ್ವಾರಂಟೈನ್‌ನಲ್ಲಿ
ಹೊಸದಿಲ್ಲಿಯ ನಿಝಾಮುದ್ದೀನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲೆಯಿಂದ ಯಾರೂ ಭಾಗವಹಿಸಿಲ್ಲ. ಆದರೆ ಆ ಸಮಯದಲ್ಲಿ ಇತರೆ ಕಾರ್ಯದ ಮೇಲೆ ಹೊಸದಿಲ್ಲಿಗೆ ಹೋಗಿದ್ದ ಜಿಲ್ಲೆಯ 16 ಮಂದಿಯನ್ನು ಮೊಬೈಲ್ ಟವರ್ ಮೂಲಕ ಗುರುತಿಸಲಾಗಿದ್ದು, ಇವರಲ್ಲಿ 9 ಮಂದಿಯನ್ನು ಈಗಾಗಲೇ ಆಸ್ಪತ್ರೆಯ ಕ್ವಾರಂಟೈನ್ ಮಾಡಿದ್ದೇವೆ. ಇತರ ಏಳು ಮಂದಿ ಬೇರೆ ಬೇರೆ ಜಿಲ್ಲೆಗಳಲ್ಲಿದ್ದು ಸಂಬಂಧಪಟ್ಟ ಜಿಲ್ಲಾಡಳಿತಕ್ಕೆ ಅವರ ಬಗ್ಗೆ ಮಾಹಿತಿ ನೀಡಲಾಗಿದೆ. ಹೀಗಾಗಿ ಜಿಲ್ಲೆಯ ಸಾರ್ವಜನಿಕರು ಆತಂಕ ಪಡಬೇಕಾದ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಸ್ಪಷ್ಠಪಡಿಸಿದರು.
ಜಿಲ್ಲೆಯಲ್ಲಿರುವ ವಲಸೆ ಕಾರ್ಮಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಜಿಲ್ಲಾಡಳಿತ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಕಾರ್ಮಿಕರು ಆತಂಕ ಪಡುವ ಅಗತ್ಯವಿಲ್ಲ. ಈಗಾಗಲೇ 3800 ಮಂದಿಗೆ ಅಗತ್ಯ ವ್ಯವಸ್ಥೆ ಕಲ್ಪಿಸಿದ್ದು, ಕಾರ್ಮಿಕರು ರೈಲ್ವೆ ಹಳಿಗಳ ಮೇಲೆ, ರಸ್ತೆಯಲ್ಲಿ ಸಂಚರಿಸಬಾರದು. ಮಧ್ಯರಾತ್ರಿ ಎದ್ದು ನಮ್ಮ ಜಿಲ್ಲೆ ಬಿಟ್ಟು ಹೊಗಬೇಡಿ ಎಂದು ಡಿಸಿ ತಿಳಿಸಿದರು.
ಸೋಂಕಿತ ವ್ಯಕ್ತಿಯಿಂದ ವೆಚ್ಚ ವಸೂಲಿ
ಜಿಲ್ಲೆಯಲ್ಲಿ ಕೊರೋನ ವೈರಸ್ ಪತ್ತೆಯಾಗಿರುವ ಕಾಪು ಮೂಲದ ಯುವಕನ ಸಂಪರ್ಕಕ್ಕೆ ಬಂದ ಎಲ್ಲ ರೋಗಿಗಳ ವೆಚ್ಚ ಅವರೇ ಭರಿಸಬೇಕು. ಕ್ವಾರಂಟೈನ್ ನಲ್ಲಿರಬೇಕಾದ ವ್ಯಕ್ತಿ ಕ್ರಿಕೆಟ್ ಆಡಿದ್ದಾನೆ. ನಿಯಮ ಉಲ್ಲಂಘನೆ ಮಾಡಿ ಎಲ್ಲ ಕಡೆ ಓಡಾಡಿದ್ದಾನೆ. ಹೋಮ್ ಕ್ವಾರಂಟೈನ್‌ನ ಸೂಚನೆ ನೀಡಿದರೂ ಆ ವ್ಯಕ್ತಿ ಹೊರಗಡೆ ಓಡಾಡಿದ್ದಾನೆ. ಹೀಗಾಗಿ ಆತನಿಂದಲೇ ಎಲ್ಲರ ವೆಚ್ಚವನ್ನು ವಸೂಲಿ ಮಾಡುತ್ತೇನೆ ಎಂದು ಜಿ.ಜಗದೀಶ್ ತಿಳಿಸಿದರು.
ಆತನಿಂದ ಊರಿಗೆ ಆದ ವೆಚ್ಚವನ್ನು ಆ ಪೇಷೆಂಟ್ ಕೊಡಬೇಕು. ಆ ವ್ಯಕ್ತಿಯ ಮೇಲೆ ಕ್ರಿಮಿನಲ್ ಕೇಸು ದಾಖಲಿಸುತ್ತೇವೆ. ಇದೇ ರೀತಿ ಉದ್ಧಟತನ ತೋರಿದ ಎಲ್ಲಾ ಪೇಷಂಟ್ ಪಾರ್ಟಿಯಿಂದ ವೆಚ್ಚವನ್ನು ವಸೂಲಿ ಮಾಡುತ್ತೇವೆ. ಕಾನೂನು ಉಲ್ಲಂಸಿದವರಿಗೆ ಎರಡು ವರ್ಷ ಜೈಲುವಾಸ ವಿಧಿಸುವ ಅವಕಾಶ ಇದೆ ಎಂದು ಉಡುಪಿ ಜಿಲ್ಲಾಧಿಕಾರಿ ತಿಳಿಸಿದರು.