ಮಂಗಳೂರು ಬಂದರ್‌ಗೆ ಚೀನಾದ ಹಡಗು ಆಗಮನ ಸುದ್ದಿ ಸುಳ್ಳು: ಎಂಆರ್‌ಪಿಎಲ್ ಸ್ಪಷ್ಟನೆ

Update: 2020-04-02 15:10 GMT
ಸಾಂದರ್ಭಿಕ ಚಿತ್ರ

ಮಂಗಳೂರು, ಎ.2: ಚೀನಾ ಮೂಲದ ಬೃಹತ್ ಹಡಗೊಂದು ಎಂಆರ್‌ಪಿಎಲ್ ಡಿಸೇಲ್ ಸಾಗಾಟಕ್ಕೆ ಸಂಬಂಧಿಸಿದಂತೆ ಮಂಗಳೂರು ಬಂದರ್‌ಗೆ ಆಗಮಿಸಿದೆ ಎನ್ನುವ ಸುದ್ದಿ ಸತ್ಯಕ್ಕೆ ದೂರವಾದುದು ಎಂದು ಎಂಆರ್‌ಪಿಎಲ್ (ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್‌) ಸ್ಪಷ್ಟಪಡಿಸಿದೆ.

ಚೀನಾದ ಹಡಗು ಹಾಗೂ ನಾವಿಕರ ಬಗ್ಗೆ ಸುದ್ದಿವಾಹಿನಿಯೊಂದು ಗಾಳಿಸುದ್ದಿ ಬಿತ್ತರಿಸುವ ಮೂಲಕ ಜನರಲ್ಲಿ ಆತಂಕ ಮೂಡಿಸಿದೆ. ವಾಟ್ಸ್ಆ್ಯಪ್ ಮೆಸೇಜ್ ಆಧರಿತ ವಿಷಯವನ್ನು ಸುದ್ದಿಯಾಗಿ ಬಿತ್ತರಿಸಿರುವುದು ವಿಷಾದನೀಯ ಎಂದು ಸಂಸ್ಥೆ ಬೇಸರ ವ್ಯಕ್ತಪಡಿಸಿದೆ.

ಯಾವುದೇ ಹಡಗಿನ ಆಯ್ಕೆ, ನಿಲುಗಡೆ, ಅದರ ಲೋಡಿಂಗ್ ಬಗ್ಗೆ ಕೇಂದ್ರ ಸರಕಾರದಿಂದ ನಿರ್ದೇಶಿಸಲ್ಪಟ್ಟ ಅನ್ವಯವೇ ನಿರ್ವಹಿಸಲಾಗುವುದು. ಕೇಂದ್ರದ ಯಾವುದೇ ನಿಯಮ‌ ಉಲ್ಲಂಘಿಸಲಾಗಿಲ್ಲ. ಕೊರೋನ ವೈರಸ್ ವಿಷಯದಲ್ಲಿ ಯಾವುದೇ ಅಸಡ್ಡೆ ತೋರುವುದಿಲ್ಲ ಎಂದು ಸಂಸ್ಥೆ ತಿಳಿಸಿದೆ.

ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಸುಳ್ಳು ಸುದ್ದಿಗಳನ್ನು ಪ್ರಕಟಿಸುವ ಮಾಧ್ಯಮಗಳ ಮನಸ್ಥಿತಿ ಸಮಾಜಕ್ಕೆ ಅಪಾಯಕಾರಿ ಎಂದು ಎಂಆರ್‌ಪಿಎಲ್ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ (ಕಾರ್ಪೊರೇಟ್ ಕಮ್ಯೂನಿಕೇಶನ್) ರುಡಾಲ್ಫ್ ವಿ.ಜೆ.‌ ನೊರೋನ್ಹ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News