ಕೊರೋನವೈರಸ್: ಉಡುಪಿಯಲ್ಲಿ ಶಂಕಿತ 10 ಮಂದಿಯ ಸ್ಯಾಂಪಲ್ ರವಾನೆ

Update: 2020-04-02 15:17 GMT

ಉಡುಪಿ, ಎ.2: ಶಂಕಿತ ನೋವೆಲ್ ಕೊರೋನ ವೈರಸ್ ಸೋಂಕಿಗಾಗಿ ಇಂದು ಒಟ್ಟು ಮೂವರು ಜಿಲ್ಲೆಯ ಆಸ್ಪತ್ರೆಗಳಿಗೆ ದಾಖಲಾಗಿದ್ದು, ಇಂದು ಒಟ್ಟು 10 ಮಂದಿಯ ಗಂಟಲಿನ ದ್ರವವನ್ನು ಸೋಂಕಿನ ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಗುರುವಾರ ಶಂಕಿತ ಕೋವಿಡ್-19 ಸೋಂಕಿಗಾಗಿ ಒಬ್ಬ ಮಹಿಳೆ ಹಾಗೂ ಉಸಿರಾಟ ತೊಂದರೆಗಾಗಿ ತಲಾ ಒಬ್ಬ ಪುರುಷ ಮತ್ತು ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ ಆರು ಮಂದಿ ಕೋವೆಡ್ ಶಂಕಿತರು ಹಾಗೂ ನಾಲ್ವರು ಕೋವಿಡ್ ಸಂಪರ್ಕಿತರ ಸ್ಯಾಂಪಲ್‌ಗಳನ್ನು ಸೋಂಕಿನ ಪರೀಕ್ಷೆಗಾಗಿ ಶಿವಮೊಗ್ಗದ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಅವರು ತಿಳಿಸಿದರು.

ಇಂದು ಒಟ್ಟು 21 ಮಂದಿಯ ಮಾದರಿ ಪರೀಕ್ಷಾ ವರದಿ ತಮ್ಮ ಕೈಸೇರಿದ್ದು, ಎಲ್ಲವೂ ನೆಗೆಟಿವ್ ಆಗಿ ಬಂದಿದೆ. ಹೀಗಾಗಿ ಇದುವರೆಗೆ ಕಳುಹಿಸಿದ 181 ಮಂದಿಯ ಸ್ಯಾಂಪಲ್‌ಗಳಲ್ಲಿ 158 ಮಂದಿಯ ವರದಿ ನೆಗೆಟಿವ್ ಆಗಿ ಬಂದಿದ್ದರೆ, ಮೂವರದ್ದು ಮಾತ್ರ ಪಾಸಿಟಿವ್ ಆಗಿದೆ. ಇನ್ನೂ ಒಟ್ಟು 20 ಮಂದಿಯ ವರದಿ ಬರಬೇಕಾಗಿದೆ ಎಂದವರು ವಿವರಿಸಿದರು.

ಗುರುವಾರ 122 ಮಂದಿಯೂ ಸೇರಿದಂತೆ ಇದುವರೆಗೆ ಒಟ್ಟು 1888 ಮಂದಿ ತಪಾಸಣೆಗಾಗಿ ನೋಂದಣಿ ಮಾಡಿಕೊಂಡಿದ್ದಾರೆ. ಇವರಲ್ಲಿ 142 (ಇಂದು 17) ಮಂದಿ 28 ದಿನಗಳ ನಿಗಾ ಪೂರೈಸಿದ್ದರೆ, 833 (90) ಮಂದಿ 14 ದಿನಗಳ ನಿಗಾವನ್ನು ಪೂರ್ಣಗೊಳಿಸಿದ್ದಾರೆ. ಒಟ್ಟು 873 ಮಂದಿ ಹೋಮ್ ಕ್ವಾರಂಟೈನ್ ಹಾಗೂ 166 ಮಂದಿ ಆಸ್ಪತ್ರೆ ಕ್ವಾರಂಟೈನ್‌ನಲ್ಲಿದ್ದಾರೆ ಎಂದು ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದರು.

ಫೀವರ್ ಕ್ಲಿನಿಕ್: ಜಿಲ್ಲೆಯಲ್ಲಿರುವ ಪ್ರತಿಯೊಂದು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಮೈಕೈ ನೋವು, ನೆಗಡಿ ಸಹಿತ ಶೀತಜ್ವರ ಇರುವವರ ಪರೀಕ್ಷೆಗೆ ಪ್ರತ್ಯೇಕ ವ್ಯವಸ್ಥೆ ಮಾಡುವಂತೆ ನಿರ್ದೇಶನಗಳನ್ನು ನೀಡಲಾಗಿದೆ. ಈ ರೋಗ ಲಕ್ಷಣದ ರೋಗಿಗಳನ್ನು ಹೊರರೋಗಿ ವಿಭಾಗದಿಂದ ಪ್ರತ್ಯೇಕಿಸುವಂತೆ ಸೂಚಿಸಲಾಗಿದೆ ಎಂದು ಡಿಎಚ್‌ಓ ತಿಳಿಸಿದರು.

ಅಲ್ಲದೇ ಎಲ್ಲಾ ತಾಲೂಕು ಆಸ್ಪತ್ರೆ, ಸಮುದಾಯ ಆಸ್ಪತ್ರೆ ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿ ಫೀವರ್ ಕ್ಲಿನಿಕ್ (ಜ್ವರ ಕ್ಲಿನಿಕ್)ತೆರೆಯುವಂತೆ ತಿಳಿಸಲಾಗಿದೆ. ಈ ಫೀವರ್ ಕ್ಲಿನಿಕ್‌ನಲ್ಲಿ ಶಂಕಿತರಿಗೆ ಐಸೋಲೇಷನ್ ಸೌಲಭ್ಯ ಹಾಗೂ ರೋಗಿಯ ಗಂಟಲು ದ್ರವ ಪರೀಕ್ಷೆಗೆ ಬೇಕಾದ ಸೌಲಭ್ಯವನ್ನು ಒದಗಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.

ಕುಂದಾಪುರ ತಾಲೂಕು ಆರೋಗ್ಯ ಕೇಂದ್ರ ವ್ಯಾಪ್ತಿಯ ಗಂಗೊಳ್ಳಿ, ಕಿರಿಮಂಜೇಶ್ವರ, ನಾಡ, ಕಾರ್ಕಳ ತಾಲೂಕು ಆರೋಗ್ಯ ಕೇಂದ್ರ ವ್ಯಾಪ್ತಿಯ ದುರ್ಗಾ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಕೋವಿಡ್-19ರ ಕುರಿತು ಜಾಗೃತಿ ಮತ್ತು ಮಾಹಿತಿ ನೀಡುವ ಕಾರ್ಯ ಮಾಡಿದರು. ಅಲ್ಲದೇ ಹೋಮ್ ಕ್ವಾರಂಟೈನ್ ಇರುವ ಮನೆಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News