ಏಮ್ಸ್ ವೈದ್ಯರಿಗೆ ಕೊರೋನ ವೈರಸ್ ಸೋಂಕು

Update: 2020-04-02 17:27 GMT

ಹೊಸದಿಲ್ಲಿ, ಎ.2: ದಿಲ್ಲಿಯ ಪ್ರತಿಷ್ಟಿತ ಅಖಿಲ ಭಾರತ ವೈದ್ಯವಿಜ್ಞಾನ ಸಂಸ್ಥೆ(ಎಐಐಎಂಎಸ್)ಯ ಸ್ಥಾನಿಕ ವೈದ್ಯರೊಬ್ಬರಿಗೆ ಕೊರೊನ ವೈರಸ್ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ದಿಲ್ಲಿಯಲ್ಲಿ ಮಾರಣಾಂತಿಕ ಸೋಂಕು ತಗುಲಿದ ವೈದ್ಯರ ಸಂಖ್ಯೆ 7ಕ್ಕೇರಿದೆ.

   ಇವರು ಎಐಐಎಂಎಸ್‌ನ ಜೀವಶಾಸ್ತ್ರ ವಿಭಾಗದಲ್ಲಿ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದು ಈಗ ಹೆಚ್ಚಿನ ಪರೀಕ್ಷೆಗಾಗಿ ಖಾಸಗಿ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ ಹಾಗೂ ಕುಟುಂಬದವರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಕರ್ತವ್ಯದಲ್ಲಿರುವಾಗ ಬೀಳ್ಕೊಡುಗೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದಾಗಿ ಈ ವೈದ್ಯರು ತಿಳಿಸಿದ ಹಿನ್ನೆಲೆಯಲ್ಲಿ ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಬುಧವಾರ ದಿಲ್ಲಿಯ ಮೂವರು ವೈದ್ಯರಲ್ಲಿ ಕೊರೋನ ಸೋಂಕು ದೃಢಪಟ್ಟಿದ್ದು ಇದರಲ್ಲಿ ಇಬ್ಬರು ಎಐಐಎಂಎಸ್‌ನ ಎದುರು ಬದಿಯಲ್ಲಿರುವ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇನ್ನೊಬ್ಬ ವೈದ್ಯ ಸರ್ದಾರ್ ವಲ್ಲಭಭಾಯ್ ಪಟೇಲ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸಫ್ದರ್‌ಜಂಗ್ ಆಸ್ಪತ್ರೆಯ ಕೊರೋನ ಸೋಂಕಿತ ವೈದ್ಯರಲ್ಲಿ ಒಬ್ಬರು ಜೀವರಸಾಯನಶಾಸ್ತ್ರದಲ್ಲಿ ಮೂರನೇ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಯಾಗಿದ್ದು ಇತ್ತೀಚೆಗಷ್ಟೇ ದುಬೈಯಿಂದ ವಾಪಸಾಗಿದ್ದರು. ಇನ್ನೊಬ್ಬ ವೈದ್ಯರಿಗೆ ರೋಗಿಯ ಮೂಲಕ ಈ ಸೋಂಕು ತಗುಲಿದೆ. ದಿಲ್ಲಿಯ ಮೊಹಲ್ಲಾ ಕ್ಲಿನಿಕ್‌ನ ವೈದ್ಯ ದಂಪತಿಗೆ ಸೋಂಕು ದೃಢಪಟ್ಟಿದ್ದು ಅವರ ಪುತ್ರಿಗೂ ಸೋಂಕು ತಗುಲಿದೆ.

ದಿಲ್ಲಿಯ ಕ್ಯಾನ್ಸರ್ ಸಂಸ್ಥೆಯ ವೈದ್ಯೆಯಲ್ಲೂ ಕೊರೋನ ಸೋಂಕು ದೃಢಪಟ್ಟಿದ್ದು ಇವರು ಇತ್ತೀಚೆಗೆ ಬ್ರಿಟನ್‌ನಿಂದ ವಾಪಸಾಗಿದ್ದ ಕೆಲವು ಸಂಬಂಧಿಕರನ್ನು ಭೇಟಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News