ಕೊರೋನ ವಿರುದ್ಧದ ಹೋರಾಟಕ್ಕೆ 2 ವರ್ಷಗಳ ವೇತನ ನೀಡಿದ ಗೌತಮ್ ಗಂಭೀರ್

Update: 2020-04-02 17:57 GMT

ಹೊಸದಿಲ್ಲಿ, ಎ. 2: ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಪಿಎಂ- ಕೇರ್ ಫಂಡ್‌ಗೆ ತನ್ನ ಎರಡು ವರ್ಷದ ವೇತನವನ್ನು ನೀಡುವುದಾಗಿ ಬಿಜೆಪಿ ಮುಖಂಡ ಮತ್ತು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಘೋಷಿಸಿದ್ದಾರೆ.

ದೇಶದಲ್ಲಿ ಇದುವರೆಗೆ 50ಕ್ಕೂ ಹೆಚ್ಚು ಪ್ರಾಣಬಲಿ ಪಡೆದಿರುವ ಮಾರಣಾಂತಿಕ ಸೋಂಕಿನ ವಿರುದ್ಧ ಸರಕಾರ ನಡೆಸುತ್ತಿರುವ ಹೋರಾಟಕ್ಕೆ ಉದಾರ ದೇಣಿಗೆ ನೀಡುವಂತೆ ಜನರಲ್ಲಿ ಅವರು ಮನವಿ ಮಾಡಿದ್ದಾರೆ. ಗಂಭೀರ್ ಪೂರ್ವ ದಿಲ್ಲಿ ಸಂಸದೀಯ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

ಕೊರೋನ ವೈರಸ್ ವಿರುದ್ಧದ ಹೋರಾಟಕ್ಕೆ ಗಂಭೀರ್ ನೀಡುತ್ತಿರುವ ಎರಡನೇ ದೇಣಿಗೆ ಇದಾಗಿದೆ. ದಿಲ್ಲಿಯಲ್ಲಿರುವ ಸರಕಾರಿ ಆಸ್ಪತ್ರೆಯಲ್ಲಿ ಕೊರೋನ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡಲು ವೈದ್ಯಕೀಯ ಉಪಕರಣ ಖರೀದಿಗೆ ಸೋಮವಾರ ತನ್ನ ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ 50 ಲಕ್ಷ ರೂ. ನೀಡುವುದಾಗಿ ಗೌತಮ್ ಗಂಭೀರ್ ಘೋಷಿಸಿದ್ದರು.

ಕೊರೋನ ವೈರಸ್ ವಿರುದ್ಧ ಕಾರ್ಯಾಚರಣೆಗೆ ನಿಧಿ ಸಂಗ್ರಹಿಸುವ ಉದ್ದೇಶದಿಂದ ಪ್ರೈಮ್ ಮಿನಿಸ್ಟರ್ಸ್ ಸಿಟಿಝನ್ ಅಸಿಸ್ಟೆನ್ಸ್ ಆ್ಯಂಡ್ ರಿಲೀಫ್ ಇನ್ ಎಮರ್ಜೆನ್ಸಿ ಸಿಚುವೇಷನ್ ಫಂಡ್ (ಪಿಎಂ-ಕೇರ್ ನಿಧಿ) ಎಂಬ ಹೆಸರಿನ ನೂತನ ದತ್ತಿನಿಧಿಯನ್ನು ಆರಂಭಿಸಲಾಗಿದ್ದು ಪ್ರಧಾನಿ ಇದರ ಅಧ್ಯಕ್ಷರಾಗಿರುತ್ತಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ ಮತ್ತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸದಸ್ಯರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News