ತಲಪಾಡಿ: ಜಾಗೃತಿ ಪಡೆಯ ಸಭೆ

Update: 2020-04-02 17:42 GMT

ಉಳ್ಳಾಲ, ಎ.2: ಕಾಸರಗೋಡು ರೆಡ್ ವಲಯದಲ್ಲಿರುವುದರಿಂದ ಕರ್ನಾಟಕ-ಕೇರಳ ಗಡಿಭಾಗವಾದ ತಲಪಾಡಿ ಗ್ರಾಮಸ್ಥರು ಸದಾ ಎಚ್ಚರದಿಂದ ಇರಬೇಕಾದ ಅನಿವಾರ್ಯತೆ ಇದೆ. ಆದರೆ ಯಾರೂ ಭತಪಡುವ ಅಗತ್ಯವಿಲ್ಲ ಎಂದು ತಲಪಾಡಿ ಗ್ರಾಪಂ ಅಧ್ಯಕ್ಷ ಸುರೇಶ್ ಆಳ್ವ ಸಾಂತ್ಯಗುತ್ತು ಹೇಳಿದರು. ತಲಪಾಡಿ ಗ್ರಾಪಂ ವತಿಯಿಂದ ಎ.ಪಿ.ಜೆ.ಅಬ್ದುಲ್ ಕಲಾಂ ಸಭಾಂಗಣದಲ್ಲಿ ಗುರುವಾರ ನಡೆದ ಕೊರೋನ ಜಾಗೃತಿಗಾಗಿ ರಚಿಸಲಾದ ಜಾಗೃತಿ ಪಡೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜನಪ್ರತಿನಿಧಿಗಳು ಬ್ಯಾಗ್ ಹಿಡಿದು ತಿರುಗಾಡುವ ಬದಲು, ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕಿದೆ. ಜನ ಗುಂಪು ಸೇರದಂತೆ ಮನವೊಲಿಸುವ ಕೆಲಸ ಮಾಡಬೇಕಿದೆ. ನಾವೂ ಜಾಗರೂಕತೆಯಿಂದ ಇದ್ದು ಇತರರಿಗೂ ಜಾಗೃತಿ ಮೂಡಿಸಿದಾಗ ಕೊರೋನ ವೈರಸ್ ಬಾರದಂತೆ ತಡೆಗಟ್ಟಲು ಸಾಧ್ಯ ಎಂದು ಸುರೇಶ್ ಆಳ್ವ ಸಾಂತ್ಯಗುತ್ತು ತಿಳಿಸಿದರು.

ಆರೋಗ್ಯವಂತರು ಮಾಸ್ಕ್ ಹಾಕಬೇಕಿಲ್ಲ. ಒಂದು ಮಾಸ್ಕ್ ಒಮ್ಮೆಗೆ ಮಾತ್ರ ಕಟ್ಟುವಂತದ್ದು. ಜ್ವರ, ನೆಗಡಿ, ಉಸಿರಾಟದ ಸಮಸ್ಯೆ ಇರುವವರು, ವೈರಸ್ ಇರುವವರಿಗೆ ಚಿಕಿತ್ಸೆ ನೀಡುತ್ತಿರುವವರು ಮಾಸ್ಕ್ ಕಟ್ಟಿಕೊಳ್ಳುವುದು ಅಗತ್ಯ. ಎಲ್ಲರೂ ಮಾಸ್ಕ್ ಕಟ್ಟುವುದಾದರೆ ದೇಶದ ಜನಸಂಖ್ಯೆಗೆ ಅನುಗುಣವಾಗಿ ಮಾಸ್ಕ್ ದೊರಕುವುದು ಕಷ್ಟ ಎಂದು ಕೋಟೆಕಾರ್ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಲಲಿತಾ ಹೇಳಿದರು.

ಸಭೆಯಲ್ಲಿ ಗ್ರಾಪಂ ಉಪಾಧ್ಯಕ್ಷೆ ಜಯಲಕ್ಷ್ಮಿ, ಗ್ರಾಮಕರಣಿಕೆ ಶಿಲ್ಪಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಶಾರದಾ, ಪೊಲೀಸ್ ಕಾನ್‌ಸ್ಟೇಬಲ್ ದಿನೇಶ್, ಡಾ.ದಿನೇಶ್, ವೈದ್ಯೆ ದಿವ್ಯಾ ಶೆಟ್ಟಿ, ಸಾಮಾಜಿಕ ಕಾರ್ಯಕರ್ತೆ ವಾಣಿ ಮತ್ತಿತರರು ಉಪಸ್ಥಿತರಿದ್ದರು. ಗ್ರಾಪಂ ಅಭಿವೃದ್ಧಿ ಅಧಿಕಾರಿ ಕೇಶವ ಪೂಜಾರಿ ಪಾವೂರು ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News