ಇರಾನ್: ಮತ್ತೆ 124 ಸಾವು

Update: 2020-04-02 17:46 GMT

ಟೆಹರಾನ್ (ಇರಾನ್), ಎ. 2: ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 124 ಸಾವುಗಳು ಸಂಭವಿಸಿವೆ ಎಂದು ಇರಾನ್ ಗುರುವಾರ ವರದಿ ಮಾಡಿದೆ. ಇದರೊಂದಿಗೆ ದೇಶದಲ್ಲಿ ನೂತನ-ಕೊರೋನವೈರಸ್‌ನಿಂದಾಗಿ ಸಂಭವಿಸಿದ ಸಾವುಗಳ ಸಂಖ್ಯೆ 3,160ಕ್ಕೆ ಏರಿದೆ.

ಇದೇ ಅವಧಿಯಲ್ಲಿ 3,111 ಹೊಸ ಸೋಂಕು ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಸಚಿವಾಲಯದ ವಕ್ತಾರರೊಬ್ಬರು ಪತ್ರಿಕಾಗೋಷ್ಠಿಯೊಂದರಲ್ಲಿ ತಿಳಿಸಿದರು. ಇದರೊಂದಿಗೆ ದೇಶದಲ್ಲಿ ವರದಿಯಾಗಿರುವ ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ 50,468ಕ್ಕೆ ಏರಿದೆ. ಈ ಪೈಕಿ 16,711 ಮಂದಿ ಚೇತರಿಸಿಕೊಂಡಿದ್ದಾರೆ.

ಸ್ಪೇನ್: 950 ಹೊಸ ಸಾವು

ಸ್ಪೇನ್‌ನಲ್ಲಿ ಒಂದು ದಿನದ ಅವಧಿಯಲ್ಲಿ ಕೊರೋನವೈರಸ್‌ನಿಂದಾಗಿ 950 ಹೊಸ ಸಾವುಗಳು ಸಂಭವಿಸಿವೆ ಎಂದು ಅದು ಗುರುವಾರ ವರದಿ ಮಾಡಿದೆ.

ಇದರೊಂದಿಗೆ ದೇಶದಲ್ಲಿ ಸಂಭವಿಸಿದ ಸಾವುಗಳ ಒಟ್ಟು ಸಂಖ್ಯೆ 10,003ನ್ನು ತಲುಪಿದೆ. ಇಟಲಿ ಬಳಿಕ ಕೊರೋನವೈರಸ್ ಸಾವಿನ ಸಂಖ್ಯೆಯಲ್ಲಿ ಸ್ಪೇನ್ ಎರಡನೇ ಸ್ಥಾನದಲ್ಲಿದೆ. ಇದೇ ಅವಧಿಯಲ್ಲಿ, ಆ ದೇಶದಲ್ಲಿ ದಾಖಲಾಗಿರುವ ಸೋಂಕು ಪ್ರಕರಣಗಳ ಸಂಖ್ಯೆ 1,10,000ವನ್ನು ದಾಟಿದೆ ಎಂದು ಸರಕಾರ ತಿಳಿಸಿದೆ.

ಇಟಲಿ: ಮತ್ತೆ 727 ಸಾವು

ಇಟಲಿಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊರೋನವೈರಸ್‌ನಿಂದಾಗಿ 727 ಸಾವುಗಳು ಸಂಭವಿಸಿವೆ ಎಂದು ಆ ದೇಶ ಬುಧವಾರ ವರದಿ ಮಾಡಿದೆ. ಇದರೊಂದಿಗೆ ಆ ದೇಶದಲ್ಲಿ ಸಂಭವಿಸಿದ ಸಾವುಗಳ ಒಟ್ಟು ಸಂಖ್ಯೆ 13,155ಕ್ಕೆ ಏರಿದೆ.

ಇದೇ ಅವಧಿಯಲ್ಲಿ 4,784 ಸೋಂಕು ಪ್ರಕರಣಗಳು ಹೊಸದಾಗಿ ವರದಿಯಾಗಿವೆ ಹಾಗೂ ಒಟ್ಟು ಪ್ರಕರಣಗಳ ಸಂಖ್ಯೆ 1,10,574ಕ್ಕೆ ಏರಿದೆ. ಮಂಗಳವಾರದ ಸಾವು 837ಕ್ಕೆ ಹೋಲಿಸಿದರೆ, ಬುಧವಾರದ ಸಾವಿನ ಪ್ರಮಾಣದಲ್ಲಿ ಇಳಿಕೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News