ನಿರಾಶ್ರಿತರಿಗೆ ಆಹಾರ ವಿತರಣೆ: ಕೈಕಂಬದ ಕುಟುಂಬದಿಂದ ಮಾನವೀಯ ಸೇವೆ

Update: 2020-04-03 07:10 GMT

ಮಂಗಳೂರು, ಎ.3: ನಗರದ ಸೆಂಟ್ರಲ್ ರೈಲ್ವೇ ನಿಲ್ದಾಣಕ್ಕೆ ವೆನ್‌ಲಾಕ್ ಕಡೆಯಿಂದ ಸಾಗುವ ರಸ್ತೆಯ ಬಳಿ ಏಳೆಂಟು ಮಂದಿ ನಿರಾಶ್ರಿತರಿಗೆ ಕಾರಿನಿಂದ ಇಳಿದ ದಂಪತಿ ಹಾಗೂ ಹೆಣ್ಣು ಮಗಳೊಬ್ಬಳು ಆಹಾರದ ಪೊಟ್ಟಣ ನೀಡುತ್ತಿದ್ದರು. ಜಿಲ್ಲಾಡಳಿತ, ಮನಪಾ ಮಾತ್ರವಲ್ಲದೆ, ಹಲವಾರು ಸಂಘ ಸಂಸ್ಥೆಗಳ ಮೂಲಕ ನಗರದ ಮೂಲೆ ಮೂಲೆಗಳಲ್ಲಿರುವ ನಿರಾಶ್ರಿತರಿಗೆ ಸದ್ಯ ಎರಡು ಹೊತ್ತಿನ ಊಟ ನೀಡುವ ವ್ಯವಸ್ಥೆ ನಡೆಯುತ್ತಿದೆ. ಅದರ ನಡುವೆಯೂ ಇಂದು ಬೆಳಗ್ಗೆ ಸುಮಾರು 11 ಗಂಟೆಯ ಸುಮಾರಿಗೆ ಕಂಡು ಬಂದ ಈ ದೃಶ್ಯ, ಇಂತಹ ಮಾನವೀಯ ಸೆಳೆತಕ್ಕೇನೂ ನಮ್ಮ ಮಂಗಳೂರಿನಲ್ಲಿ ಬರವಿಲ್ಲ ಎಂಬ ಸಮಾಧಾನ ನೀಡುವಂತಿದೆ.

ಅವರು ತೊಟ್ಟಿದ್ದ ವಸ್ತ್ರದಲ್ಲಿ ಅವರು ಲಯನ್ಸ್ ಸಂಸ್ಥೆಯ ಪ್ರತಿನಿಧಿಗಳೆಂಬುದು ಸ್ಪಷ್ಟವಾಗಿತ್ತು. ಹಾಗಿದ್ದರೂ ಅವರನ್ನು ಪತ್ರಿಕಾ ಪ್ರತಿನಿಧಿ ಮಾತನಾಡಿಸಿದಾಗ,‘‘ನಾವು ಕೈಕಂಬದವರು. ಈಗಾಗಲೇ ಜಿಲ್ಲಾಡಳಿತ, ಮುಜರಾಯಿ ಇಲಾಖೆಯಿಂದ ಈ ರೀತಿ ನಿರಾಶ್ರಿತರಿಗೆ, ವಲಸಿಗರಿಗೆ, ಹಸಿದವರಿಗೆ ಊಟ ನೀಡುವ ವ್ಯವಸ್ಥೆ ಇದೆ. ಹಾಗಿದ್ದರೂ ನಾವು ಪ್ರತಿನಿತ್ಯ ಮನೆಯಲ್ಲಿ ಬೆಳಗ್ಗೆ ಹಾಗೂ ಕೆಲವೊಮ್ಮೆ ಮಧ್ಯಾಹ್ನದ ಹೊತ್ತಿನ ತಿಂಡಿ, ಊಟವನ್ನು ಈ ರೀತಿಯಾಗಿ ಬಂದು ಅಲ್ಲಲ್ಲಿ ಕಂಡವರಿಗೆ ನೀಡುತ್ತೇವೆ. ದಿನಕ್ಕೆ 30ರಷ್ಟು ಆಹಾರದ ಪೊಟ್ಟಣ ತಯಾರಿಸಿ ತರುತ್ತೇವೆ’’ ಎಂದು ಗೋವರ್ದನ್ ಶೆಟ್ಟಿ ತಿಳಿಸಿದರು.

‘‘ನಮ್ಮ ಕೈಕಂಬದ ಮನೆಯ ಶೆಡ್‌ನಲ್ಲಿ ನಾವು 11 ವಲಸಿಗ ಕಾರ್ಮಿಕ ಕುಟುಂಬಕ್ಕೆ ಆಶ್ರಯ ನೀಡಿದ್ದೇವೆ. ಕುಟುಂಬದಲ್ಲಿ ಮಕ್ಕಳು ಸೇರಿ ಒಟ್ಟು 25 ಮಂದಿ ಇದ್ದಾರೆ. ಅವರಿಗೆ ವಾರಕ್ಕೊಮ್ಮೆ ರೇಶನ್ ವ್ಯವಸ್ಥೆ ಮಾಡುತ್ತೇವೆ. ಅವರೇ ಆಹಾರ ತಯಾರಿಸಿಕೊಳ್ಳುತ್ತಾರೆ. ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ ನಮ್ಮಿಂದಾಗುವ ಸಹಾಯವನ್ನು ಮಾಡುತ್ತಿರುವುದಷ್ಟೆ’’ ಎಂದು ಗೋವರ್ದನ್ ಅವ ಪತ್ನಿ ಸುಪ್ರೀತಾ ಶೆಟ್ಟಿ ಹೇಳಿದರು.

ದಂಪತಿ ಜತೆ ಮಗಳು ಕೂಡಾ ಇದ್ದು ಹೆತ್ತವರ ಈ ಮಾನವೀಯ ಸೇವೆಗೆ ಸಾಕ್ಷಿಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News