ಸ್ಥಳಾಂತರವಾಗದ ಹಣ್ಣು-ತರಕಾರಿ ಸಗಟು ವ್ಯಾಪಾರ: ಬೈಕಂಪಾಡಿಯ ಎಪಿಎಂಸಿ ಖಾಲಿ ಖಾಲಿ

Update: 2020-04-03 07:48 GMT

ಮಂಗಳೂರು, ಎ.3: ಕಳೆದ ಎರಡು ದಿನಗಳ ಹಿಂದೆ, ಮಂಗಳೂರಿನ ಸೆಂಟ್ರಲ್ ಮಾರುಕಟ್ಟೆಯಲ್ಲಿ ರಾತ್ರಿ 11ರಿಂದ 4 ಗಂಟೆಯವರೆಗೆ ಸಗಟು ವ್ಯಾಪಾರಸ್ಥರು ರಿಟೇಲ್ ವ್ಯಾಪಾರಸ್ಥರಿಗೆ ತರಕಾರಿ ಹಾಗೂ ಹಣ್ಣು ಹಂಪಲು ಮಾರಾಟಕ್ಕೆ ಅವಕಾಶವನ್ನು ಜಿಲ್ಲಾಡಳಿತ ಕಲ್ಪಿಸಿತ್ತು. ಆದರೆ ಬುಧವಾರ ರಾತ್ರಿ ಸೆಂಟ್ರಲ್ ಮಾರುಕಟ್ಟೆಯಲ್ಲಿ ಖರೀದಿಗಾಗಿ ವ್ಯಾಪಾರಸ್ಥರು ಅಧಿಕ ಸಂಖ್ಯೆಯಲ್ಲಿ ಸೇರಿದ್ದ ಕಾರಣ ಮುಂಜಾಗೃತಾ ಕ್ರಮವಾಗಿ ಹಣ್ಣು ಹಾಗೂ ತರಕಾರಿ ಸಗಟು ವ್ಯಾಪಾರವನ್ನು ಬೈಕಂಪಾಡಿಯ ಎಪಿಎಂಸಿಗೆ ಜಿಲ್ಲಾಧಿಕಾರಿ ಸ್ಥಳಾಂತರಿಸಿ ಆದೇಶಿಸಿದ್ದರು.

ಆದರೆ ಇಂದು ಸಗಟು ವ್ಯಾಪಾರಸ್ಥರು ಅಲ್ಲಿ ಯಾವುದೇ ವ್ಯವಹಾರ- ವ್ಯಾಪಾರವನ್ನು ಆರಂಭಿಸಿಲ್ಲ. ಯಾವುದೇ ರೀತಿಯ ಚಟುವಟಿಕೆಗಳು ಅಲ್ಲಿ ಇನ್ನೂ ಆರಂಭವಾಗಿಲ್ಲ. ಅಲ್ಲಿ ಸೂಕ್ತ ವ್ಯವಸ್ಥೆ ಇಲ್ಲದಿರುವುದು ಹಾಗೂ ಅದು ನಗರಕ್ಕೆ ಸಾಕಷ್ಟು ದೂರವಿರುವುದರಿಂದ ಅಲ್ಲಿಗೆ ರಿಟೇಲ್ ವ್ಯಾಪಾರಸ್ಥರು ಬರಲಾರರು ಎಂಬ ಕಾರಣಕ್ಕೆ ಸಗಟು ವ್ಯಾಪಾರಸ್ಥರು ಸದ್ಯ ಅಲ್ಲಿ ವ್ಯಾಪಾರಕ್ಕೆ ಹಿಂದೇಟು ಹಾಕಿದ್ದಾರೆ.

‘‘ಎಪಿಎಂಸಿಗೆ ನಮ್ಮ ವ್ಯಾಪಾರವನ್ನು ಸ್ಥಳಾಂತರಿಸುವ ಆಲೋಚನೆ ಅಥವಾ ತರಾತುರಿ ಇಲ್ಲ. ಸದ್ಯ ನಾವು ಅಲ್ಲಿಗೆ ಹೋಗದಿರಲು ನಿರ್ಧರಿಸಿದ್ದೇವೆ. ಈ ಬಗ್ಗೆ ಇಂದು ಮಧ್ಯಾಹ್ನ 1 ಗಂಟೆಗೆ ಮತ್ತೆ ಸ್ಥಳೀಯ ಶಾಸಕರನ್ನು ಒಳಗೊಂಡು ವ್ಯಾಪಾರಸ್ಥರ ಸಭೆ ಕರೆಯಲಾಗಿದೆ. ಸಗಟು ವ್ಯಾಪಾರಸ್ಥರು ಸದ್ಯ ಅಲ್ಲಿಗೆ ವ್ಯಾಪಾರ ಸ್ಥಳಾಂತರಿಸದೆ, ಪ್ರಧಾನಿ ನರೇಂದ್ರ ಮೋದಿಯವರು ಕೊರೋನ ನಿಯಂತ್ರಣಕ್ಕೆ ಸಂಬಂಧಿಸಿ ಲಾಕ್‌ಡೌನ್ ಘೋಷಿಸಿದ್ದಾರೆ. ಅದಕ್ಕೆ ಬದ್ಧರಾಗಿ ಎ. 14ರವರವರೆಗೆ ಸದ್ಯ ನಾವು ವ್ಯಾಪಾರವನ್ನೇ ನಿಲ್ಲಿಸಿ ಮನೆಯಲ್ಲಿರಲು ನಿರ್ಧರಿಸಿದ್ದೇವೆ. ಸಭೆಯಲ್ಲಿ ಯಾವ ತೀರ್ಮಾನ ಆಗುತ್ತದೆ ನೋಡೋಣ’’ ಎಂದು ಸೆಂಟ್ರಲ್ ಮಾರುಕಟ್ಟೆ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಮುಹಮ್ಮದ್ ಕುಂಞಿ ವಾರ್ತಾಭಾರತಿ ಪ್ರತಿನಿಧಿಯ ಕರೆಗೆ ಪ್ರತಿಕ್ರಿಯಿಸಿದ್ದಾರೆ.

‘‘ಮಂಗಳೂರಿನಿಂದ ಬೈಕಂಪಾಡಿಗೆ ರಿಟೇಲ್ ವ್ಯಾಪಾರಸ್ಥರು ಬರಲು ಒಪ್ಪುವುದಿಲ್ಲ. ಅದು ಬಹಳಷ್ಟು ದೂರವಿರುವುದರಿಂದ ಅವರು ಅಲ್ಲಿಗೆ ಬರಲಾರರು. ಈ ಬಗ್ಗೆ ನಾವು ನಿನ್ನೆಯೇ ಸಂಬಂಧಪಟ್ಟವರಿಗೆ ತಿಳಿಸಿದ್ದೇವೆ. ಈ ಹಿಂದೆಯೂ ವ್ಯಾಪಾರವನ್ನು ಎಪಿಎಂಸಿಗೆ ಸ್ಥಳಾಂತರಿಸಲು ನಿರ್ಧರಿಸಲಾಗಿತ್ತು. ಆಗಲೂ ಯಾರೂ ಹೋಗಲು ಒಪ್ಪಿರಲಿಲ್ಲ. ಮುಖ್ಯವಾಗಿ ಅದು ಕೈಗಾರಿಕಾ ವಲಯ. ಆ ಪ್ರದೇಶ ಹಣ್ಣು ತರಕಾರಿ ತಾಜಾವಾಗಿ ಇರಿಸಲು ಸೂಕ್ತವಾದ ಪ್ರದೇಶ ಅಲ್ಲದಿರುವುದೂ ಇದಕ್ಕೊಂದು ಕಾರಣವಾಗಿದೆ. ಅದಕ್ಕಾಗಿ ನಾವು ನಮ್ಮ ಕಾರ್ಯವನ್ನೇ ಸ್ಥಗಿತಗೊಳಿಸುವುದಾಗಿ ಸಂದೇಶ ನೀಡಿದ್ದೇವೆ. ಈಗಾಗಲೇ ಇದ್ದ ತರಕಾರಿ, ಹಣ್ಣು ಹಂಪಲುಗಳನ್ನು ಮಾರಾಟ ಮಾಡಲಾಗಿದ್ದು, ಅದನ್ನು ರಿಟೇಲ್ ವ್ಯಾಪಾರಸ್ಥರು ಜನರಿಗೆ ತಲುಪಿಸುವ ಕಾರ್ಯ ಮಾಡಿದ್ದಾರೆಂಬುದು ನಮ್ಮ ಅನಿಸಿಕೆ’’ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News