ಮಂಗಳೂರು: ಅನಗತ್ಯ ವಾಹನ ಸಂಚಾರಕ್ಕೆ ಬ್ರೇಕ್; ಪೊಲೀಸರಿಂದ ಕಟ್ಟುನಿಟ್ಟಿನ ತಪಾಸಣೆ

Update: 2020-04-03 07:47 GMT

ಮಂಗಳೂರು, ಎ.3: ನಗರದಲ್ಲಿ ಖಾಸಗಿ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿರುವ ಹಿನ್ನೆಲೆಯಲ್ಲಿ ಇಂದು ನಗರದ ಆಯಕಟ್ಟಿನ ಸ್ಥಳಗಳಲ್ಲಿ ನಗರ ಪ್ರವೇಶಿಸುವ ವಾಹನಗಳ ಮೇಲೆ ಪೊಲೀಸರು ಹದ್ದುಕಣ್ಣಿನ ತಪಾಸಣೆ ನಡೆಸುತ್ತಿದ್ದಾರೆ.

ಇಂದು ಕೂಡಾ ಬೆಳಗ್ಗೆ 7ರಿಂದ 12 ಗಂಟೆಯವರೆಗೆ ದಿನಸಿ ಸಾಮಗ್ರಿಗಳನ್ನು ಖರೀದಿಸಲು ಅವಕಾಶವಿದ್ದರೂ ಅನಗತ್ಯ ಖಾಸಗಿ ವಾಹನಗಳ ಸಂಚಾರವನ್ನು ಮಾಡುವಂತಿಲ್ಲ. ಹಾಗಾಗಿ ಪೊಲೀಸರು ನಗರದ ಪಂಪ್‌ವೆಲ್, ಅಂಬೇಡ್ಕರ್ ವೃತ್ತ (ಜ್ಯೋತಿ ಸರ್ಕಲ್) ಕ್ಲಾಕ್ ಟವರ್, ಪುರಭವನದ ಎದುರು ವಾಹನಗಳನ್ನು ತಪಾಸಣೆಗೊಳಪಡಿಸಿ ಪಾಸ್ ಇದ್ದಲ್ಲಿ ಮಾತ್ರವೇ ಸಂಚಾರಕ್ಕೆ ಅವಕಾಶ ನೀಡುತ್ತಿದ್ದಾರೆ.

ಇಂದು ನಗರದಲ್ಲಿ ಪ್ರಮುಖ ರಸ್ತೆಗಳಲ್ಲಿ ಮಾತ್ರವಲ್ಲದೆ, ಒಳ ರಸ್ತೆಗಳಲ್ಲಿಯೂ ದ್ವಿಚಕ್ರ ವಾಹನ ಸೇರಿದಂತೆ ಖಾಸಗಿ ವಾಹನಗಳ ಸಂಚಾರ ವಿರಳವಾಗಿದೆ. ಬಹುತೇಕ ಮಂದಿ ದಿನಸಿ ಸಾಮಗ್ರಿಗಳನ್ನು ಖರೀದಿಸಿ ನಡೆದುಕೊಂಡು ಹೋಗುತ್ತಿರುವುದು ಕಂಡು ಬಂತು.

ಅಂಗಡಿ, ಮಾರುಕಟ್ಟೆಗಳಲ್ಲಿಲ್ಲ ಕ್ಯೂ
ದಿನಸಿ ಸಾಮಗ್ರಿಗಳ ಖರೀದಿಗೆ ಅಂಗಡಿ, ಸೂಪರ್, ಹೈಪರ್ ಮಾರುಕಟ್ಟೆಗಳಲ್ಲಿಯೂ ಗ್ರಾಹಕರ ಸಂಖ್ಯೆ ಅತಿ ವಿರಳವಾಗಿದೆ. ಎಲ್ಲಿಯೂ ಸರತಿ ಸಾಲು ಕಂಡುಬಂದಿಲ್ಲ. ಜನರು ಆರಾಮವಾಗಿ ತಮ್ಮ ಅಗತ್ಯದ ವಸ್ತುಗಳನ್ನು ಖರೀದಿಸಿ ಹಿಂತಿರುಗುತ್ತಿದ್ದಾರೆ.

ಸ್ತಬ್ಧವಾದ ಸೆಂಟ್ರಲ್ ಮಾರುಕಟ್ಟೆ
ನಗರದ ಸೆಂಟ್ರಲ್ ಮಾರುಕಟ್ಟೆಯಿಂದ ಹಣ್ಣು ಹಾಗೂ ತರಕಾರಿ ಸಗಟು ವ್ಯಾಪಾರವನ್ನು ಸಂಪೂರ್ಣವಾಗಿ ನಗರದ ಎಪಿಸಿಎಂಸಿಗೆ ಸ್ಥಳಾಂತರಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದರು. ಇಂದು ಕೂಡಾ ಸೆಂಟ್ರಲ್ ಮಾರುಕಟ್ಟೆ ಬೆಳಗ್ಗಿನ ಹೊತ್ತು ಸ್ತಬ್ಧವಾಗಿತ್ತು. ಮಾರುಕಟ್ಟೆ ಆವರಣದ ಹೊರ ಭಾಗದ ಕೆಲವು ಮುಖ್ಯ ರಸ್ತೆಗಳಲ್ಲಿ ಕೆಲವು ವ್ಯಾಪಾರಿಗಳು ಹಣ್ಣು, ತರಕಾರಿ ಮಾರಾಟ ನಡೆಸಿದ್ದರೂ, ಗ್ರಾಹಕರ ಸಂಖ್ಯೆ ಅತಿ ವಿರಳವಾಗಿತ್ತು.

ಇದೇ ವೇಳೆ ನಗರದ ಸ್ಟೇಟ್‌ಬ್ಯಾಂಕ್ ಸಮೀಪದ ಮೀನು ಮಾರುಕಟ್ಟೆಯಲ್ಲಿ ಕೆಲ ಮೀನು ವ್ಯಾಪಾರಿಗಳು ಮಾರಾಟ ನಡೆಸುತ್ತಿದ್ದರೂ, ಅಲ್ಲಿಯೂ ಗ್ರಾಹಕರು ವಿರಳವಾಗಿದ್ದರು. ನಗರದ ಒಳಭಾಗದ ಬೀದಿಗಳಲ್ಲಿ ಮನೆಗಳೆದುರು ಟೆಂಪೋಗಳನ್ನು ತಂದು ನಿಲ್ಲಿಸಿ ತರಕಾರಿ, ಹಣ್ಣು ಹಂಪಲುಗಳ ಮಾರಾಟ ನಡೆಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News