ಕೊಣಾಜೆ: ಕ್ವಾರಂಟೈನ್ ನಲ್ಲಿದ್ದ ಮಹಿಳೆಗೆ ಗ್ರಾಮಸ್ಥರಿಂದ ದಿಗ್ಬಂಧನ; ಆರೋಪ

Update: 2020-04-03 10:58 GMT
ಸಾಂದರ್ಭಿಕ ಚಿತ್ರ

ಕೊಣಾಜೆ, ಎ.3: ಕೊಣಾಜೆ ಗ್ರಾಮದಲ್ಲಿ ಹೋಮ್ ಕ್ವಾರಂಟೈನ್ ನಲ್ಲಿದ್ದ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರಿಗೆ ಗ್ರಾಮಸ್ಥರು ದಿಗ್ಬಂಧನ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಈ ಹಿನ್ನೆಲೆಯಲ್ಲಿ ಅವರ ಮನೆಗೆ ಶಾಸಕ ಯು.ಟಿ.ಖಾದರ್ ಹಾಗೂ ಬಿಜೆಪಿ ಮುಖಂಡ ಸಂತೋಷ್ ಬೋಳಿಯಾರ್ ಗುರುವಾರ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.

ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಕಳೆದ ಕೆಲ ದಿನಗಳ ಹಿಂದೆ ಕೊರೋನ ಸೋಂಕಿತ ಎನ್ನಲಾದ ಹತ್ತು ತಿಂಗಳ ಮಗುವನ್ನು ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದಿದ್ದ ಸಂದರ್ಭದಲ್ಲಿ ಎತ್ತಿಕೊಂಡಿದ್ದರು ಎನ್ನಲಾಗಿದೆ. ಬಳಿಕ ಭಯಭೀತರಾಗಿದ್ದ ಇವರನ್ನು ವೈದ್ಯಕೀಯ ತಪಾಸಣೆ ನಡೆಸಿದ್ದು, ನೆಗೆಟಿವ್ ಎಂದು ಬಂದಿದ್ದರೂ ಸ್ವಲ್ಪ‌ ಸಮಯ ಹೋಮ್ ಕ್ವಾರಂಟೈನ್ ನಲ್ಲಿ ಇರುವಂತೆ ವೈದ್ಯರು ಸೂಚಿಸಿದ್ದರು. ಬಳಿಕ ಇವರು ಮನೆಯಲ್ಲೇ ಇದ್ದ ವಿಷಯ ಊರಿನವರಿಗೂ ಇತ್ತೀಚೆಗೆ ತಿಳಿದಿತ್ತು ಎಂದು ತಿಳಿದು ಬಂದಿದೆ. ಈ ನಡುವೆ ಮಹಿಳೆಯ ಕುಟುಂಬ ದಿಗ್ಬಂಧನದಲ್ಲಿದೆ ಎಂಬ ಆರೋಪವೂ ಕೇಳಿ ಬಂದಿದ್ದು, ಈ ಬಗ್ಗೆ ಸುದ್ದಿವಾಹಿನಿಗಳಲ್ಲಿ ವರದಿ ಬಂದಿತ್ತು.

ಈ ಹಿನ್ನೆಲೆಯಲ್ಲಿ ಶಾಸಕ ಖಾದರ್ ಅವರು ಭೇಟಿ ನೀಡಿ ಕುಟುಂಬಕ್ಕೆ ಅಗತ್ಯ ವಸ್ತುಗಳನ್ನು ನೀಡಿದ್ದಾರೆ. ಅಲ್ಲದೆ ಬಿಜೆಪಿ ಮುಖಂಡ ಸಂತೋಷ್ ಬೋಳಿಯಾರ್ ಕೂಡಾ ಭೇಟಿ ನೀಡಿ‌ ದಿನ ಬಳಕೆ ವಸ್ತುಗಳನ್ನು ನೀಡಿ ಧೈರ್ಯ ತುಂಬಿದ್ದಾರೆ.

ಸುಳ್ಳು ಆರೋಪ: ಮಹಿಳೆ‌ ಮತ್ತು ಕುಟುಂಬಕ್ಕೆ ದಿಗ್ಬಂಧನ ಅಥವಾ ಬಹಿಷ್ಕಾರ ಹಾಕಿದ್ದಾರೆ ಎಂಬುದು ಸುಳ್ಳು ಸುದ್ದಿಯಾಗಿದ್ದು ಗ್ರಾಮಸ್ಥರು ಅವರ ಕುಟುಂಬವನ್ನು‌ ಆ ನಿಟ್ಟಿನಲ್ಲಿ ನೋಡಿಲ್ಲ. ಅಲ್ಲದೆ ಪಂಚಾಯತ್ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಭೇಟಿ ನೀಡಿ ಮನೆಯಿಂದ ಹೊರಗೆ ಬಾರದಂತೆ ತಿಳಿಸಿದ್ದಾರೆ ಹಾಗೂ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದರು. ಅವರಿಗೆ ದಿಗ್ಬಂಧನ ಹಾಕಲಾಗಿದೆ ಎಂಬುದು‌ ಸತ್ಯಕ್ಕೆ ದೂರವಾದದ್ದು ಎಂದು‌ ಗ್ರಾಮಸ್ಥರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News