ಪುತ್ತೂರು: ಅನಗತ್ಯವಾಗಿ ಸಂಚರಿಸುತ್ತಿದ್ದ ವಾಹನಗಳು ಪೊಲೀಸ್ ವಶಕ್ಕೆ

Update: 2020-04-03 10:01 GMT

ಪುತ್ತೂರು, ಎ.3: ಲಾಕ್‍ಡೌನ್ ಹಾಗೂ ಸಂಪೂರ್ಣ ಜಿಲ್ಲಾ ಬಂದ್ ಹಿನ್ನಲೆಯಲ್ಲಿ ಪುತ್ತೂರಿನಲ್ಲಿ ಶುಕ್ರವಾರ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡರು. ಜಿಲ್ಲಾಡಳಿತ ಆದೇಶದಂತೆ ಅನಗತ್ಯವಾಗಿ ಓಡಾಡುವ ಖಾಸಗಿ ವಾಹನಗಳನ್ನು ತಡೆದು ನಿಲ್ಲಿಸಿ ವಾಪಾಸು ಕಳುಹಿಸುವ ಹಾಗೂ ಅದೇಶ ಉಲ್ಲಂಘಿಸಿ ಓಡಾಟ ನಡೆಸಿದ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು. 

ಜಿಲ್ಲಾಡಳಿತ ಜನತೆಯ ಹಾಗೂ ವಾಹನಗಳ ಅನಗತ್ಯ ಸಂಚಾರ ನಿಯಂತ್ರಿಸುವ ಹಿನ್ನಲೆಯಲ್ಲಿ ಖಾಸಗಿ ಕಾರುಗಳನ್ನು ನಿರ್ಬಂಧಿಸಿದೆ. ಆದರೂ ಪುತ್ತೂರು ಮತ್ತು ಉಪ್ಪಿನಂಗಡಿ ಪೇಟೆಯಲ್ಲಿ ಖಾಸಗಿ ಕಾರುಗಳ ಓಡಾಟಕ್ಕೆ ಮಾತ್ರ ತಡೆ ಕಂಡುಬರಲಿಲ್ಲ. ಇದನ್ನು ಗಮನಿಸಿದ ಪೊಲೀಸ್ ಇಲಾಖೆ ಪುತ್ತೂರು ದರ್ಬೆ ವೃತ್ತ, ಪರ್ಲಡ್ಕ, ಹಾರಾಡಿ ಮತ್ತು ನೆಕ್ಕಿಲಾಡಿಯಲ್ಲಿ ಖಾಸಗಿ ವಾಹನಗಳನ್ನು ತಡೆದು ವಾಪಾಸು ಕಳುಹಿಸಿದರು. ಮೆಡಿಕಲ್ ಹಾಗೂ ಅತೀ ಅಗತ್ಯದ ವಿಚಾರಗಳಿಗೆ ಸಂಬಂಧಿಸಿದಂತೆ ರಿಯಾಯತಿ ನೀಡಲಾಯಿತು. ಇದನ್ನು ಮೀರಿ ನಗರದಲ್ಲಿ ಓಡಾಟ ನಡೆಸುತ್ತಿದ್ದ ಖಾಸಗಿ ಕಾರುಗಳನ್ನು ಡಿವೈಎಸ್ಪಿ ದಿನಕರ್ ಶೆಟ್ಟಿ ಅವರ ನೇತೃತ್ವದಲ್ಲಿ ವಶಕ್ಕೆ ಪಡೆದುಕೊಂಡರು. 

ತಾಲೂಕಿನ ಪ್ರಮುಖ ಪೇಟೆಗಳಾದ ಪುತ್ತೂರು ನಗರ ಹಾಗೂ ಉಪ್ಪಿನಂಗಡಿಯಲ್ಲಿ ಬೈಕ್ ಸವಾರರ ಒಡಾಟ ಮಾತ್ರ ಅತಿಯಾಗಿ ಕಂಡುಬಂತು. ಗ್ರಾಮೀಣ ಭಾಗದಿಂದ ದಿನಸಿ, ಔಷಧಿ ಮತ್ತಿತರ ಕಾರಣಗಳಿಗೆ ಅಟೋ ರಿಕ್ಷಾ ಮತ್ತುಜೀಪ್ ಗಳಲ್ಲಿ ಬರುವುದು ಜನತೆಗೆ ಹೊರೆಯಾಗಿ ಪರಿಣಮಿಸಿದೆ. ಅದರಲ್ಲೂ 10ರಿಂದ 15 ಕಿಮೀ ದೂರದ ಪ್ರದೇಶಗಳಿಂದ ಪೇಟೆಗಳಿಗೆ ಬಾಡಿಗೆ ವಾಹನಗಳ ಮೂಲಕ ಬರಬೇಕಾದ ಅನಿವಾರ್ಯತೆ ಜನತೆಗೆ ಎದುರಾಗಿದೆ. ಇಂತಹ ಬಾಡಿಗೆ ವಾಹನದಲ್ಲಿ ಒಬ್ಬರೇ ಬಂದು ಆಹಾರ ಒಯ್ಯಬೇಕು ಎನ್ನುವ ಹಿನ್ನಲೆಯಲ್ಲಿ ಗ್ರಾಮೀಣ ಭಾಗದ ಜನತೆಯ ಪಾಲಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News