ಉಳ್ಳಾಲ: ಪಡಿತರ ಚೀಟಿದಾರರಿಗೆ ಸಿಗದ ಗೋದಿ; ಮುಗಿಯದ ಸರ್ವರ್ ಸಮಸ್ಯೆ

Update: 2020-04-03 11:45 GMT

ಉಳ್ಳಾಲ: ನ್ಯಾಯ ಬೆಲೆ ಅಂಗಡಿಯಿಂದ ಅಕ್ಕಿ ಮತ್ತು ಗೋದಿ ತರಲೆಂದು ತೆರಳಿದ್ದ ಬಿಪಿಎಲ್ ಪಡಿತರ ಚೀಟಿದಾರರಿಗೆ ಗೋಧಿ ಸಿಗದೆ ಕೇವಲ ಅಕ್ಕಿ ಮಾತ್ರ ಪಡೆದುಕೊಂಡು ವಾಪಾಸಾದ ಘಟನೆ ಉಳ್ಳಾಲ ಭಾಗದಲ್ಲಿ ನಡೆದಿದೆ.

‌ಬಿಪಿಎಲ್ ಕುಟುಂಬಗಳಿಗೆ ಎರಡು ತಿಂಗಳ ಅಕ್ಕಿ ಮತ್ತು ಗೋಧಿ ವಿತರಣೆ ಎ. 2ರಿಂದ ನೀಡಲಾಗುವುದು ಎಂದು ಸರ್ಕಾರ ಘೋಷಿಸಿತ್ತು. ಈ ಹಿನ್ನೆಲೆಯಲ್ಲಿ ಪಡಿತರ ಚೀಟಿದಾರರು ಬೆಳಗ್ಗೆ ನ್ಯಾಯ ಬೆಲೆ ಅಂಗಡಿ ಮುಂದೆ ಕಾದು ನಿಂತರೂ ಗೋಧಿ ಸರಬರಾಜು ಆಗದ ಕಾರಣ ಕೇವಲ ಅಕ್ಕಿ ಮಾತ್ರ ಪಡೆದುಕೊಂಡರು. ಕೇವಲ ಗೋಧಿಗಾಗಿ ಬಂದಿದ್ದ ಬಿಪಿಎಲ್ ಪಡಿತರ ಚೀಟಿದಾರರು ನಿರಾಶೆಯಿಂದ ಬರಿಗೈಯಲ್ಲಿ ವಾಪಸಾದರು.

ಮುಗಿಯದ ಸರ್ವರ್ ಸಮಸ್ಯೆ: 
ನ್ಯಾಯಬೆಲೆ ಅಂಗಡಿಯಲ್ಲಿ ಸರ್ವರ್ ಸಮಸ್ಯೆ ಆಗಾಗ ಸೃಷ್ಟಿಯಾಗುತ್ತಿದ್ದ ಹಿನ್ನೆಲೆಯಲ್ಲಿ ಪಡಿತರ ಚೀಟಿದಾರರು ಅಂಗಡಿ ಮುಂಭಾಗದಲ್ಲಿ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಅದರಿಂದ ಹಿರಿಯ ನಾಗರಿಕರು ತುಂಬಾ ತೊಂದರೆ ಅನುಭವಿಸಬೇಕಾಯಿತು. ಸರ್ವರ್ ನಿಧಾನವಾದರೆ ನಮ್ಮಿಂದ ಏನೂ ಮಾಡಲು ಸಾಧ್ಯವಿಲ್ಲ ಎನ್ನುವುದು ಅಂಗಡಿ ಮಾಲಕರು ಆಗಾಗ ಪಡಿತರ ಚೀಟಿದಾರರಿಗೆ ಸೂಚಿಸುತ್ತಿರುವುದು ಕಂಡು ಬಂತು.

ಗೋಧಿಗಾಗಿ ಇನ್ನೊಮ್ಮೆ ಬರಬೇಕೇ?
ಕೇವಲ ನಾಲ್ಕು ಕೆ.ಜಿ. ಗೋಧಿ ಗಾಗಿ 60ರೂ. ಖರ್ಚು ಮಾಡಿ ಇನ್ನೊಮ್ಮೆ ಬರಬೇಕೇ ಎನ್ನುವುದು ಪಡಿತರ ಚೀಟಿದಾರರ ಪ್ರಶ್ನೆಯಾಗಿತ್ತು. ಅಕ್ಕಿ ಮತ್ತು ಗೋಧಿ ಒಟ್ಟಿಗೆ ವಿತರಣೆ ಮಾಡಲಾಗುವುದು ಎಂದು ಹೇಳಿದ ಸರ್ಕಾರ ಕೇವಲ ಅಕ್ಕಿ ಮಾತ್ರ ವ್ಯವಸ್ಥೆ ಮಾಡಿರುವುದರ ಬಗ್ಗೆ ಪಡಿತರ ಚೀಟಿದಾರರು ತೀವ್ರ ಅಸಮಾಧಾನ ಕೂಡ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News