ಕೇಂದ್ರ-ರಾಜ್ಯ ಸರಕಾರಗಳ ಯೋಜನೆ ಜಿಲ್ಲೆಗೆ ತಲುಪಿಲ್ಲ: ಐವನ್ ಡಿಸೋಜ

Update: 2020-04-03 11:53 GMT

ಮಂಗಳೂರು, ಎ.3: ಕೊರೋನ ವೈರಸ್ ಹರಡದಂತೆ ಲಾಕ್‌ಡೌನ್ ಮಾಡಿದ ನಂತರ ಕೇಂದ್ರ- ರಾಜ್ಯ ಸರಕಾರದಿಂದ ಯಾವುದೇ ಯೋಜನೆಗಳು ಫಲಾನುಭವಿಗಳಿಗೆ ತಲುಪಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಆರೋಪಿಸಿದ್ದಾರೆ.

ಪಡಿತರ ಅಂಗಡಿಗಳ ಮೂಲಕ 7 ಕೆಜಿ ಅಕ್ಕಿ, 7 ಕೆಜಿ ಗೋಧಿ, ಎರಡು ಕೆಜಿ ತೊಗರಿಬೇಳೆ ಕೊಡುವುದಾಗಿ ಸರಕಾರಗಳು ಘೋಷಣೆ ಮಾಡಿದ್ದವು. ಆದರೆ ಈಗ ಕೇವಲ 5 ಕೆಜಿ ಅಕ್ಕಿ ಮಾತ್ರ ನೀಡಲಾಗುತ್ತಿದೆ ಎಂದು ಹೇಳಿದರು.

ಅಲ್ಲದೆ, ಪಿಂಚಣಿದಾರಿಗೆ ಮೂರು ತಿಂಗಳ ಪಿಂಚಣಿ  ಹಣ, ರೈತರಿಗೆ ವಿಶೇಷ ಪ್ರೋತ್ಸಾಹ, ನರೇಗಾ ಯೋಜನೆಯಡಿ ಮುಂಗಡ ಸಂಬಳ, ವಾಹನಗಳ ಇಎಂಐ ಕಟ್ಟದೇ ಅದರ ಬಡ್ಡಿಯನ್ನು  ಕಟ್ಟುಬೇಕಾಗಿಲ್ಲ ಎಂದೂ ಸರಕಾರಗಳು ಗಂಟಾಘೋಷವಾಗಿ ಹೇಳಿಕೊಂಡಿದ್ದವು. ಆದರೆ ಯಾವುದೇ ಯೋಜನೆಗಳು ಜಿಲ್ಲೆಯನ್ನು ತಲುಪಿಲ್ಲ.‌ ಕೂಡಲೇ ಯೋಜನೆ ಜಾರಿಗೊಳಿಸಲು ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಆಗ್ರಹಿಸಿದರು.

ರಾಜ್ಯದ ಎಪಿಎಲ್ ಮತ್ತು ಬಿಪಿಎಲ್ ಕಾರ್ಡುದಾರರಿಗೆ ಸಮಾನವಾಗಿ ಪಡಿತರ ಸೌಲಭ್ಯಗಳನ್ನು ಒದಗಿಸಿಕೊಡಬೇಕು. ಮಧ್ಯಮ ವರ್ಗದ ಜನರು ಯಾವುದೇ ಸೌಲಭ್ಯಗಳನ್ನು ಪಡೆಯಲಾಗದೆ ತೀರಾ ಆರ್ಥಿಕ ಸಂಕಟದಲ್ಲಿ ಸಿಲುಕಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಬೇರೆ ರಾಜ್ಯದ ಜನರು ತಮ್ಮ ಜಿಲ್ಲೆಯಲ್ಲಿ ನಿರಾಶ್ರಿತರ ಕೇಂದ್ರಗಳಲ್ಲಿ ದಾಖಲಾಗಿದ್ದು, ಅವರಿಗೆ ಬಟ್ಟೆ ಮತ್ತು ವಸತಿಗೆ ಬೇಕಾದ ಸಾಮಗ್ರಿ ಮತ್ತು ಇನ್ನಿತರ ದಿನನಿತ್ಯದ ಸಾಮಗ್ರಿಗಳನ್ನು ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಕರೋನ ಶಂಕಿತರ ಪರೀಕ್ಷೆಗೊಳಪಡಿಸಲು ಲ್ಯಾಬ್‌ಗಳನ್ನು ನಿರ್ಮಾಣ ಮಾಡಿದ್ದರೂ ಇನ್ನೂ ಅದು ಕಾರ್ಯ ನಿರ್ವಹಿಸುತ್ತಿಲ್ಲ. ರಾಜ್ಯದಲ್ಲಿ ಔಷಧಿಗಳ ಕೊರತೆ ಇದ್ದು, ಕೂಡಲೇ ಸಮರ್ಪಕವಾಗಿ ಒದಗಿಸಿಕೊಡುವ ಅವಶ್ಯಕತೆ ಇದೆ. ಆಹಾರ ಸಾಮಗ್ರಿಗಳ ಕೊರತೆ ಇರುವುದರಿಂದ ಈ ಬಗ್ಗೆ ನಿಗಾ ವಹಿಸಬೇಕೆಂದು ಮುಖ್ಯಮಂತ್ರಿ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಶಾಸಕ ಐವನ್ ಡಿಸೋಜ
ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News