ಸಾಮಾಜಿಕ ಜಾಲತಾಣದಲ್ಲಿ ಹರಡಿರುವ ಲಾಕ್ ಡೌನ್ ಉಲ್ಲಂಘನೆ ಸುದ್ದಿ ಸುಳ್ಳು: ಉಡುಪಿ ಪಲಿಮಾರು ಮಠದಿಂದ ಸ್ಪಷ್ಟನೆ

Update: 2020-04-03 13:12 GMT

ಉಡುಪಿ, ಎ.3: ಗುರುವಾರ ಎ.2ರ ರಾಮನವಮಿಯಂದು ತಮ್ಮ ಮಠದ ಪಟ್ಟದ ದೇವರಾದ ಶ್ರೀರಾಮದೇವರ ಪೂಜೆಯ ಚಿತ್ರದೊಂದಿಗೆ ಇತರ ಕೆಲವು ಚಿತ್ರಗಳನ್ನು ಜೋಡಿಸಿ ಪಲಿಮಾರು ಶ್ರೀಪಾದರು ಸರಕಾರದ ಆಜ್ಞೆಯನ್ನು ಉಲ್ಲಂಘಿಸಿ ನೂರಾರು ಭಕ್ತರನ್ನು ಸೇರಿಸಿ ರಾಮನವಮಿಯನ್ನು ಆಚರಿಸಿದರು ಎಂದು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಯನ್ನು ಹರಿಯಬಿಟ್ಟಿರುವುದು ಪಲಿಮಾರುಶ್ರೀಗಳಿಗೆ ಹಾಗೂ ಮಠದ ಭಕ್ತಾಭಿಮಾನಿಗಳಿಗೆ ಅಪಾರ ನೋವುಂಟು ಮಾಡಿದೆ ಎಂದು ಪಲಿಮಾರು ಮಠದ ದಿವಾನರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಠದ ಸಂಪ್ರದಾಯದಂತೆ ಚೈತ್ರಪಾಡ್ಯದಿಂದ ರಾಮನವಮಿಯ ತನಕ 9 ದಿನಗಳ ಕಾಲ ಒಂದೇ ಸ್ಥಳದಲ್ಲಿ ದೇವರ ಪೀಠವನ್ನು ಹಾಕಿ ಪೂಜೆ ಮಾಡುವುದು ಹಾಗೂ ರಾಮನವಮಿಯ ದಿನದಂದು ದೇವರಿಗೆ ಅಭಿಷೇಕದೊಂದಿಗೆ ವಿಶೇಷ ಪೂಜೆಮಾಡುವುದು ಹಿಂದಿನಿಂದ ನಡೆದು ಬಂದ ಮಠದ ಸಂಪ್ರದಾಯವಾಗಿದೆ.

ಈ ಬಾರಿ ಶಿರ್ವ ಸಮೀಪದ ಇಂದ್ರಪುರದ ಶ್ರೀ ಲಕ್ಷ್ಮಿನಿವಾಸ ಎಂಬ ಮನೆಯಲ್ಲಿ ಒಂಭತ್ತು ದಿನವಿದ್ದು ಸಂಪ್ರದಾಯದಂತೆ ಪೂಜೆಯನ್ನು ಮಾಡಿದ್ದಾರೆ. ಈ ವೇಳೆ ಮಠದ ಸಿಬ್ಬಂದಿ ವರ್ಗ ಹಾಗೂ ಮನೆಯವರು ಮಾತ್ರ ಉಪಸ್ಥಿತರಿದ್ದು, ಜಾಲತಾಣದಲ್ಲಿ ಪ್ರಕಟಗೊಂಡಿರುವ ಚಿತ್ರಗಳು ಕಳೆದ ಮಾ.14 ರಂದು ಕಳತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಪೂರ್ವಭಾವಿ ಸಭೆಯ ಚಿತ್ರವಾಗಿದೆ. ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಡಿರುವ ಸುದ್ದಿ ಸತ್ಯಕ್ಕೆ ದೂರವಾಗಿರುವುದಾಗಿದೆ ಎಂದು ಮಠದ ದಿವಾನರು ಸ್ಪಷ್ಟಿಕರಣದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News